ಪ್ರಶಾಂತ್ ಎನ್.ಮಲ್ಲಿಕ್
ಮೈಸೂರು: ಯುಗಾದಿ ಹಬ್ಬದ ಹೊಸ ತೊಡಕು ಹಿನ್ನೆಲೆ ನಗರದ ಹಲವೆಡೆ ಮಾಂಸ ಮಾರಾಟ ಜೋರಾಗಿದ್ದು, ಅದರಲ್ಲೂ ಗುಡ್ಡೆ ಮಾಂಸದ ಭರಾಟೆ ನಡೆದಿದೆ.
ಯುಗಾದಿ ಹಬ್ಬದ ಮಾರನೆ ದಿನ ಸೋಮವಾರವಿದ್ದ ಕಾರಣ ಇಂದು(ಏಪ್ರಿಲ್.1) ನೂರಾರು ಮೇಕೆ ಮತ್ತು ಕುರಿಗಳನ್ನು ಕಡಿದು ಗುಡ್ಡೆ ಮಾಂಸ ಮಾರಾಟ ಮಾಡಿದ್ದಾರೆ. ಈ ಗುಡ್ಡೆ ಮಾಂಸವನ್ನು ನಗರದ ಕೆ.ಜಿ ಕೊಪ್ಪಲು, ಕುಂಬಾರಕೊಪ್ಪಲು, ಒಂಟಿಕೊಪ್ಪಲು, ಪಡುವಾರಹಳ್ಳಿ ಸೇರಿದಂತೆ ಹಲವೆಡೆ ಭರ್ಜರಿ ಮಾರಾಟ ಮಾಡಲಾಗಿದ್ದು, ಒಂದು ಕೆ.ಜಿ.ಗುಡ್ಡೆ ಮಾಂಸಕ್ಕೆ 700 ರೂ ನಿಗಧಿ ಮಾಡಲಾಗಿದೆ.
ಯುಗಾದಿ, ಆಯುಧಪೂಜೆ, ಗೌರಿ ಹಾಗೂ ದೀಪಾವಳಿ ಹಬ್ಬಗಳ ಮಾರನೇ ದಿನ ಹೊಸ ತೊಡಕು ಎಂದು ಮಾಂಸದೂಟ ಮಾಡುವ ವಾಡಿಕೆ ಇದೆ. ಅಂತೆಯೇ ಮೈಸೂರಿನ ಸುತ್ತಮುತ್ತಲಿನ ಜನರು ಹಲವಾರು ವರ್ಷಗಳಿಂದ ಬಂದಿರುವ ಗುಡ್ಡೆ ಮಾಂಸ ಮಾರಾಟ ಮಾಡುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಇಂದು ನಗರದ ಜನರು ಗುಡ್ಡೆ ಮಾಂಸ ಖರೀದಿಗೆ ಮುಗಿಬಿದ್ದಿದ್ದು, ಭರ್ಜರಿ ಬಾಡೂಟ ಸೇವನೆ ಮಾಡಲಿದ್ದಾರೆ.





