Mysore
22
few clouds

Social Media

ಬುಧವಾರ, 07 ಜನವರಿ 2026
Light
Dark

ಮೈಸೂರು | ಸೆಸ್ಕ್‌ ವತಿಯಿಂದ ಸಂಭ್ರಮದ ಮಹಿಳಾ ದಿನಾಚರಣೆ

ಮೈಸೂರು : ನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಪಡೆದು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತಸದ ಕ್ಷಣಗಳನ್ನು ಕಳೆದರು. ಇಂತಹ ಸಂಭ್ರಮ ಹಾಗೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್)‌ದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ.

ನಗರದ ಬಲ್ಲಾಳ್‌ ವೃತ್ತದ ಬಳಿಯಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಶುಕ್ರವಾರ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ನಿಗಮದ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೆಡೆ ಸೇರಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಸೆಸ್ಕ್‌ ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ನಾನು, ನನ್ನದು ಎಂಬ ಮನಃಸ್ಥಿತಿ ಹೆಚ್ಚಾಗಿದೆ, ಇಂತಹ ಮನಸ್ಥಿತಿ ಬೆಳೆಸಿಕೊಂಡರೆ ನಾವು ಯಾವುದೇ ಕೆಲಸಗಳಲ್ಲೂ ಏಳಿಗೆ ಸಾಧಿಸಲು ಸಾಧ್ಯವಿಲ್ಲ. ಅವಿಭಕ್ತ ಕುಟುಂಬದ ವ್ಯವಸ್ಥೆಯಿಂದ ನಾವು ಹೊರ ಬಂದಾಗಿನಿಂದ ಇಂತಹ ಪ್ರವೃತ್ತಿ ಹೆಚ್ಚಾಗಿದ್ದು, ಇಂತಹ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಮಹಿಳೆ ಕೇವಲ ಕುಟುಂಬದ ಬೆನ್ನೆಲುಬು ಮಾತ್ರವಲ್ಲದೆ, ದೇಶದ ಬೆನ್ನೆಲುಬಾಗಿದ್ದು, ಮಹಿಳೆಯರು ಎಂದಿಗೂ ತಮ್ಮ ತನವನ್ನು ಬಿಟ್ಟುಕೊಡದೆ, ನಮ್ಮ ಚಿಂತನೆಗಳೊಂದಿಗೆ ಮುನ್ನಡೆಯಬೇಕಿದೆ. ನಮ್ಮ ಸರ್ಕಾರವೂ ಸಹ ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ” ಎಂದರು.

ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ಮಹಿಳಾ ದಿನಾಚರಣೆಯನ್ನು ಉತ್ತಮ ರೀತಿಯಲ್ಲಿ ಆಚರಣೆ ಮಾಡಬೇಕೆಂಬುದು ನಿಗಮದ ಅಧ್ಯಕ್ಷರ ಆಶಯವಾಗಿತ್ತು. ಅದರಂತೆ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೆಡೆ ಸೇರಿ ಸಂಭ್ರಮದಿಂದ ಮಹಿಳಾ ದಿನವನ್ನು ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಜೀವ ಕೊಡುವ ತಾಯಿಯಾಗಿ ಧೈರ್ಯ ತುಂಬುವ ಸಹೋದರಿಯಾಗಿ, ಸ್ಪೂರ್ತಿ ತುಂಬುವ ಮಡದಿಯಾಗಿ, ಸ್ನೇಹಿತೆಯಾಗಿ ಮಹಿಳೆ ಸದಾಕಾಲವೂ ನಮ್ಮ ಏಳಿಗೆಯಲ್ಲಿ ಕೈಜೋಡಿಸುತ್ತಾರೆ” ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಅವರು, ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಹಿಳಾ ದಿನಾಚರಣೆ ಶುಭಕೋರಿದರು.

ಸಮಾರಂಭದಲ್ಲಿ ನಿಗಮದ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ತಾಂತ್ರಿಕ ಶಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಎಸ್‌. ಶರಣಮ್ಮ, ಆಂತರಿಕ ಪರಿಶೋಧನೆ ಶಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಲಿಂಗರಾಜಮ್ಮ ಸೇರಿದಂತೆ ನಿಗಮದ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:
error: Content is protected !!