ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದು, ಇಂತಹ ಸಂವಿಧಾನ ವಿರೋಧಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.
ಮೈಸೂರಿನ ಆಶೋಕಪುರಂ ಪೊಲೀಸ್ ಠಾಣೆಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಡೆಸುವ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ದಲಿತ ವಿರೋಧಿ ಕಾಂಗ್ರೆಸ್‌ಗೆ ಧಿಕ್ಕಾರ, ಸಂವಿಧಾನ ವಿರೋಧಿ ಡಿ.ಕೆ.ಶಿವಕುಮಾರ್‌ಗೆ ಧಿಕ್ಕಾರ ಹಾಗೂ ಜೈ ಭೀಮ್ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಹೇಳಿರುವ ಹೇಳಿಕೆ ಬಹಳ ಖಂಡನೀಯವಾಗಿದೆ. ಈ ಕೂಡಲೇ ಕಾಂಗ್ರೆಸ್ ಸರ್ಕಾರ ಡಿಕೆಶಿ ಅವರನ್ನು ಉಪ ಮುಖ್ಯಮಂತ್ರಿಯಿಂದ ವಜಾ ಮಾಡಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಅವರ ಮೇಲೆ ಸುಮೋಟೋ ಕೇಸ್ ಹಾಕಿ ಆರೆಸ್ಟ್ ಮಾಡಬೇಕು. ಆದರೆ ಪೊಲೀಸರು ಅವರ ಮೇಲೆ ಯಾಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹನಿಟ್ರ್ಯಾಪ್ ವಿಚಾರದಲ್ಲೂ ಡಿಕೆಶಿ ಅವ ಹೆಸರು ಕೇಳಿ ಬಂದಿದೆ. ಅಲ್ಲದೇ ಈಗ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಹೇಳುತ್ತಾರೆ ಹೀಗಾಗಿ ಅವರನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು.





