ಮೈಸೂರು : ಎಸ್ಎಸ್ಎಲ್‌ಸಿ ಪರೀಕ್ಷೆಯು ಇಂದಿನಿಂದ ಆರಂಭವಾಗಿದೆ. ಮೈಸೂರು ನಗರ ಸೇರಿದಂತೆ 133 ಪರೀಕ್ಷಾ ಕೇಂದ್ರಗಳಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಜಿಲ್ಲೆಯಲ್ಲಿ ಪರೀಕ್ಷೆಯ ಪ್ರವೇಶ ಪತ್ರಕ್ಕೆ ಸಂಬಂಧಪಟ್ಟಂತೆ ಎಲ್ಲಿಯೂ ಯಾವುದೇ ರೀತಿಯ ಗೊಂದಲಗಳು ಆಗಿಲ್ಲ. ಎಲ್ಲಿಯೂ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವ ಮತ್ತು ಡಿಬಾರ್ ಪ್ರಕರಣಗಳು ನಡೆದಿಲ್ಲ. ಎಲ್ಲ ಕೇಂದ್ರಗಳಲ್ಲೂ ಕಟ್ಟುನಿಟ್ಟಾಗಿ ಪರೀಕ್ಷೆಗಳು ನಡೆದಿವೆ.
ಮೊದಲ ದಿನವೇ 3,35,969 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಜಿಲ್ಲೆಯಲ್ಲಿ 19,989 ಮಂದಿ ಬಾಲಕರು ಮತ್ತು19,114 ಮಂದಿ ಬಾಲಕಿಯರೂ ಸೇರಿದಂತೆ ಒಟ್ಟು39,103 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಮೊದಲ ದಿನದ ಪರೀಕ್ಷೆಯಲ್ಲಿ 420 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ನಿಷೇಧಾಜ್ಞೆ ಜಾರಿ
ನಗರ ಮತ್ತು ಜಿಲ್ಲೆಯ 133 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿ ಯಲ್ಲಿ ಭಾರತೀಯ ದಂಡ ಸಂಹಿತೆ 144ರ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳು ಧಾವಿಸಿದರು. ಕೆಲವರು ಕುಳಿತಲ್ಲಿ ಓದಿದ್ದನ್ನು ಮನವರಿಕೆ ಮಾಡಿಕೊಂಡರೆ ಮತ್ತೆ ಕೆಲವರು ತಮ್ಮ ಹಾಲ್ ಟಿಕೆಟ್ ಹಿಡಿದು ಕೊಠಡಿ ಸಂಖ್ಯೆ ಮತ್ತು ಕೂರುವ ಜಾಗವನ್ನು ಖಚಿತಪಡಿಸಿಕೊಳ್ಳುತ್ತಿದ್ದರು.





