ವಾಷಿಂಗ್ಟನ್: ಮಧ್ಯ ಅಮೇರಿಕಾದಲ್ಲಿನ ಭೀಕರ ಚಂಡಮಾರುತಕ್ಕೆ ಕನಿಷ್ಠ 33 ಮಂದಿ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀಕರ ಸುಂಟರಗಾಳಿಗೆ ಮನೆ ಛಾವಣಿಗಳು ಹರಿದು ಹೋಗಿದ್ದು, ಬೃಹತ್ ಟ್ರಕ್‌ಗಳು ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.
ಭಾರಿ ಗಾಳಿಯಿಂದ ಎದ್ದ ಧೂಳಿನಿಂದ ಕಾನ್ಸಾಸ್‌ನಲ್ಲಿ 50ಕ್ಕೂ ಹೆಚ್ಚು ವಾಹನಗಳು ಸಂಪರ್ಕ ಕಡಿತಗೊಂಡು ಸರಣಿ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಡಮಾರುತದಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಿಸೌರಿ ರಾಜ್ಯದ ಹೆದ್ದಾರಿ ಗಸ್ತು ಪೊಲೀಸರು ದೃಢಪಡಿಸಿದ್ದಾರೆ. ಮರಗಳು ಮತ್ತು ವಿದ್ಯುತ್ ತಂತಿಗಳು ಉರುಳಿ ಬಿದ್ದಿದೆ. ಗಾಳಿಯ ರಭಸಕ್ಕೆ ಮರೀನಾ ಬಂದರಲ್ಲಿ ಒಂದೆಡೆ ರಾಶಿ ಬಿದ್ದಿರುವ ದೋಣಿಗಳ ಚಿತ್ರವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಇದು ನಾನು ಅನುಭವಿಸಿದ ಅತ್ಯಂತ ಭಯಾನಕ ವಿಷಯ. ಚಂಡಮಾರತುದ ವೇಗ ಅತ್ಯಂತ ಭೀಕರವಾಗಿತ್ತು. ಅದರ ವೇಗಕ್ಕೆ ನಮ್ಮ ಕಿವಿಗಳು ಸಿಡಿಯುತ್ತಿದ್ದವು ಎಂದು ಮಿಸೌರಿಯ ನಿವಾಸಿ ಅಲಿಸಿಯಾ ವಿಲ್ಸನ್ ಚಂಡಮಾರುತದ ಭೀಕರತೆಯನ್ನು ತೆರೆದಿಟ್ಟರು.
ಮಿಸೌರಿಯ ವೇಯ್ನ್ ಕೌಂಟ್‌ನಲ್ಲಿ 6, ಒಝಾರ್ಕ್ ಕೌಂಟಿಯಲ್ಲಿ 3 ಹಾಗೂ ಲೂಯಿಸ್ ಕೌಂಟಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆಕ್ಸಾಸ್‌ನ ದಕ್ಷಿಣ ಭಾಗದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ಭಾಗದಲ್ಲಿ ಮೂವರು ಮೃತಪಟ್ಟು 29 ಮಂದಿ ಗಾಯಗೊಂಡಿದ್ದಾರೆ. ಮಧ್ಯ ಅಮೇರಿಕಾದ ಕನಿಷ್ಠ 2 ಲಕ್ಷ ಮನೆ ಹಾಗೂ ಕಚೇರಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





