ಬೆಂಗಳೂರು: ಪೊಲೀಸ್ ಇಲಾಖೆಯೂ ಒಂದು ಶಿಸ್ತಿನ ಇಲಾಖೆಯಾಗಿದ್ದು, ಸಮಾಜಕ್ಕೆ ಮಾದರಿಯಾಗುವಂತೆ ಆಡಳಿತ ನಡೆಸಬೇಕು. ಆದರೆ ಈ ಇಲಾಖೆಯೂ ಇದೀಗ ಮಹಿಳಾ ಅಧಿಕಾರಿಗಳ ಜಟಾಪಟಿ ಅಖಾಡವಾಗಿದ್ದು, ಐಜಿಪಿ ರೂಪಾ ಮೌದ್ಗಿಲ್ ವಿರುದ್ಧ ಡಿಐಜಿ ವರ್ತಿಕಾ ಕಟಿಯಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಇವರಿಬ್ಬರು ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಭೆ ಮಾಡಿಕೊಂಡು ಸುದ್ದಿಯಾಗಿದ್ದರು. ಆದರೆ ಈಗ ಆ ಗಲಭೆ ಒಂದು ಹಂತ ಮುಂದಕ್ಕೆ ಹೋಗಿದ್ದು, ಐಜಿಪಿ ರೂಪಾ ವಿರುದ್ಧ ರಾಜ್ಯ ಸರ್ಕಾರದ ಸಿಎಸ್ ಶಾಲಿನಿ ರಜನೀಶ್ ಅವರಿಗೆ ದಾಖಲೆ ಕಳವು ಆರೋಪದ ಮೇಲೆ ವರ್ತಿಕಾ ಅವರು ದೂರು ದಾಖಲಿಸಿದ್ದಾರೆ.
ಇನ್ನು ರೂಪಾ ಅವರು ತಮ್ಮ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆ ಕಳವು ಮಾಡಿಸಿದ್ದಾರೆ. ಆ ದಾಖಲೆಗಳನ್ನು ನಕಲಿ ಮಾಡಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಆರೋಪಿಸಿದ್ದಾರೆ.
ಡಿಜಿಪಿ ವರ್ತಿಕಾ ಕಟಿಯಾರ್ ದೂರಿನಲ್ಲಿ ಏನಿದೆ?
ಐಜಿಪಿ ರೂಪಾ ಅವರು ತಮ್ಮ ಕಚೇರಿಗೆ ಕೆಳಹಂತದ ಮೂವರು ಅಧಿಕಾರಿಗಳನ್ನು (ಮಲ್ಲಿಕಾರ್ಜುನ್, ಮಂಜುನಾಥ್ ಹಾಗೂ ಕಿರಣ್) ಬಳಸಿ ದಾಖಲೆಗಳನ್ನ ಕಳವು ಮಾಡಿಸಿದ್ದಾರೆ. ಅಲ್ಲದೇ ವಾಟ್ಸ್‌ಆಪ್ ಮೂಲಕ ಫೋಟೋ ತೆಗೆಸಿದ್ದು, ಕಂಟ್ರೋಲ್ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದಲೇ ಈ ಫೋಟೋ ತೆಗೆಸಲಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.





