ಸರಗೂರು: ಸಾಲಭಾದೆ ತಾಳಲಾರದೆ ವಿಷ ಸೇವಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳ್ಳದ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಸೋಮಶೆಟ್ಟಿ (55) ಮೃತ ರೈತ. ಇವರು ಜಮೀನಿಗೆ ಪಂಪ್‌ಸೆಟ್ ಹಾಕುವುದಕ್ಕೆ ಹಾಗೂ ಜಮೀನಿನಲ್ಲಿ ಇತರ ಬೆಳೆ ಬೆಳೆಯುವುದಕ್ಕೆ ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ ಸುಮಾರು 45 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ.
ಪಂಪ್‌ಸೆಟ್ ಅಳವಡಿಸಿ ನೀರು ಬಾರದ ಕಾರಣ ಫಸಲು ಬೆಳೆಯಲು ಸಾಧ್ಯವಾಗದೇ ತಮ್ಮ ಜಮೀನು ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದರು. ಆ ಹಣ ಕೂಡ ಸಾಲದೆ ಇರುವ ಕಾರಣ ಗುರುವಾರ ಸಂಜೆ ತಮ್ಮ ಪುತ್ರನಿಗೆ ಫೋನ್ ಕರೆ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿಸಿದ್ದಾರೆ.
ಆಗ ಕೂಡಲೇ ಪುತ್ರ ಸ್ಥಳಕ್ಕೆ ಆಗಮಿಸಿ ಸೋಮಶೆಟ್ಟಿ ಅವರನ್ನು ತುರ್ತು ವಾಹನದ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.
ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





