ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗುತ್ತೆ ಎಂದು ಬಿಜೆಪಿಯವರು ಹೇಳುತ್ತಾನೆ ಇದ್ದಾರೆ. ಆದರೆ ಬಿಜೆಪಿಯಲ್ಲೇ ಕಚ್ಚಾಟ ಹೆಚ್ಚಾಗಿದೆ. ಈಗ ಬಿಜೆಪಿ ಪಕ್ಷ ಹರಿದು ಊರು ಬಾಗಿಲು ಆಗಿದೆ. ನಮ್ಮ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಸಿಎಂ ಬದಲಾವಣೆ ಆಗಲ್ಲ ಎಂದು ಖಡಕ್ ಆಗಿ ಸಂದೇಶ ನೀಡಿದೆ. ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ನಿಂತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಯಾರೋ ಕಿಡಿಗೇಡಿ ವಿವಾದಿತ ಪೋಸ್ಟ್ ಹಾಕಿದ್ದ. ಅದಕ್ಕೆ ಕೆಲವರು ಕಾನೂನು ಕೈಗೆತ್ತಿಕೊಂಡರು. ಸರ್ಕಾರ ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿದೆ. ಇದನ್ನು ರಾಜಕೀಯ ಮಾಡಲು ಬಿಜೆಪಿ ಹೊರಟಿತ್ತು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಸತ್ಯಕ್ಕೆ ಸಿಕ್ಕ ಜಯ ಎಂದರು.
ಸೈಟ್ ವಿಚಾರವಾಗಿ ನನ್ನ ತಂದೆ ಯಾವುದೇ ಪತ್ರ ಬರೆದಿಲ್ಲ. ನನ್ನ ತಾಯಿ ಪತ್ರ ಬರೆದಿದ್ದಾರೆ. ನನ್ನ ಜಮೀನು ಬದಲಿ ಸೈಟ್ ನೀಡಿ ಎಂದು ಬರೆದಿದ್ದಾರೆ. ಸೈಟ್ ಪಡೆಯುವಲ್ಲಿ ಯಾವುದೇ ಪ್ರಭಾವ ಬಳಸಿಲ್ಲ. ಎಲ್ಲರಿಗೂ ಸೈಟ್ ಕೊಟ್ಟಂತೆ ನಮಗೂ ಕೊಟ್ಟಿದ್ದಾರೆ ಎಂದು ಹೇಳಿದರು.
ಇನ್ನು ಮುಡಾ ಹಗರಣದಲ್ಲಿ ನನ್ನ ಹೆಸರನ್ನು ಕೂಡ ತಳುಕು ಹಾಕಲು ಯತ್ನ ನಡೆಯಿತು. ನಾನು ಮುಡಾ ಸದಸ್ಯ ಆಗಿದ್ದೆ. ಎಲ್ಲಿಯೂ ಕೂಡ ನಾನು ಏನು ಹೇಳಿಲ್ಲ. ಆರ್‌ಟಿಐ ಕಾರ್ಯಕರ್ತರನ್ನು ಇಟ್ಟುಕೊಂಡು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.