ಹೊಸದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಬೆನ್ನಲ್ಲೇ ಮೂವರು ರಾಷ್ಟ್ರೀಯ ನಾಯಕರನ್ನು ಅನ್ಯ ಧರ್ಮವನ್ನು ಬಳಸಿಕೊಂಡು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ವೊಂದರಿಂದ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಈಗ ಸಹಜ ಸ್ಥಿತಿಗೆ ಮರಳಿರುವುದು ಸಮಾಧಾನದ ಸಂಗತಿ.
ಉದಯಗಿರಿಯಲ್ಲಿ ಸದಾಕಾಲವೂ ನೆಲೆಯಾಗಿ ನಿಲ್ಲಲಿ ಗಾಂಽಗಿರಿ. ಅಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಗಾಂಧಿಗಿರಿ ಶಾಶ್ವತವಾಗಿರಲಿ. ಪ್ರವಾದಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದಕ್ಕೆ ಒಂದು ಗುಂಪು ಪ್ರತಿಭಟನೆಗೆ ಇಳಿಯಿತು. ಯಾರದೋ ಪ್ರಚೋದನೆಯಿಂದ ತಾತ್ಕಾಲಿಕವಾಗಿ ಕೆರಳಿದ ಜನರು ಕೋಪದ ಕೈಗೆ ಬುದ್ಧಿ ಕೊಟ್ಟರು. ಅದರಿಂದ ಸುಮಾರು ಒಂದು ಸಾವಿರ ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯಾರೋ ಒಬ್ಬ ಕಿಡಿಗೇಡಿ ಮಾಡಿದ ದುಷ್ಕೃತ್ಯಕ್ಕೆ ಸಮುದಾಯವೊಂದು ಪ್ರಕ್ಷುಬ್ಧತೆಗೊಳಗಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತೆ ವರ್ತಿಸಿದ್ದನ್ನು ಯಾರೂ ಸಮರ್ಥನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಈಗಾಗಲೇ ಅವಹೇಳನಕಾರಿ ಪೋಸ್ಟ್‌ನ್ನು ಫಾರ್ವರ್ಡ್ ಮಾಡಿದ್ದ ಮೈಸೂರಿನ ಆರೋಪಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಉದಯಗಿರಿಯಲ್ಲಿ ಪ್ರಶಾಂತ ವಾತಾವರಣವನ್ನು ಪುನಃ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ. ಆರೋಪಿಗೆ ತಾನು ಮಾಡುತ್ತಿರುವ ಪೋಸ್ಟ್‌ನಿಂದ ಇಷ್ಟೆಲ್ಲಾ ರಾದ್ಧಾಂತ ಉಂಟಾಗಬಹುದು ಎಂಬ ಕನಿಷ್ಠ ಪ್ರಜ್ಞೆಯೂ ಇರಲಿಲ್ಲ ಅನಿಸುತ್ತದೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಹೆಜ್ಚಾಗಿ ತೊಡಗಿಸಿ ಕೊಂಡಿರುವ ಬಹುತೇಕರಿಗೆ ಜೋಶ್ ಇರುತ್ತದೆಯೇ ಹೊರತು ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹಿಸಿರುವುದಿಲ್ಲ. ಇಂತಹ ಘಟನೆಗಳಿಗೆ ಕಾರಣವಾಗಬಹುದಾದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳು ತಕ್ಷಣವೇ ಗುರುತಿಸಿ, ಅವುಗಳ ಪ್ರಸಾರವನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಬೇಕು. ಅದಲ್ಲದೆ, ಸೆನ್ ಪೊಲೀಸರಿಗೆ ಕೂಡಲೇ ಮಾಹಿತಿ ಒದಗಿಸುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು.
ಯಾವುದೇ ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರದ ಲ್ಲಿಯೂ ಸಾಧಕ-ಬಾಧಕಗಳು ಇದ್ದೇ ಇರುತ್ತವೆ. ಸಾಮಾಜಿಕ ಜಾಲತಾಣಗಳೂ ಇದಕ್ಕೆ ಹೊರತಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾ ನದ ಆಶಯಗಳಿಗೆ ಧಕ್ಕೆ ತರುವಂತಹ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆರಂಭದಲ್ಲೇ ಚಿವುಟಿ ಹಾಕಬೇಕು. ಇಲ್ಲದಿದ್ದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಸಮಾಜ ಘಾತುಕವಾಗುತ್ತದೆ ಎಂದು ಹೇಳಲಾಗದು. ಅವಹೇಳನಕಾರಿ ಪೋಸ್ಟ್‌ನಿಂದ ಸಿಟ್ಟಿಗೆದ್ದ ಕೋಮಿನ ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ಸಂದೇಶವನ್ನು ಪೋಸ್ಟ್ ಮಾಡಿ, ಒಗ್ಗೂಡಿದ್ದರು ಎಂಬ ದೂರುಗಳಿವೆ. ಅದನ್ನು ತಳ್ಳಿ ಹಾಕಲಾಗದು. ಅಲ್ಲದೆ, ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನವನ್ನು ಸಮಾಜ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವವರ ಸಂಖ್ಯೆ ಕಡಿಮೆ ಇಲ್ಲ.
ಸಂವಿಧಾನ ಧರ್ಮನಿರಪೇಕ್ಷವಾಗಿದೆ. ಯಾವುದೇ ಒಂದು ಧರ್ಮವನ್ನು ಅದು ಬೆಂಬಲಿಸುವುದಿಲ್ಲ. ಅದೇ ಕಾಲಕ್ಕೆ ಜನರ ಧಾರ್ಮಿಕ ಭಾವನೆ ಗಳಿಗೆ ಧಕ್ಕೆ ತರಬಾರದು ಎಂಬ ಅಂಶವೂ ಸಂವಿಧಾನದಲ್ಲಿ ದಾಖಲಾಗಿದೆ. ಆದರೂ ಇಂಥದ್ದೆಲ್ಲ ಏಕೆ ನಡೆಯುತ್ತಿದೆ ಎಂಬುದು ಚಿಂತನಾರ್ಹ. ಬಹುಶಃ ಕೆಲ ರಾಜಕೀಯ ಪಕ್ಷಗಳು, ಸರ್ಕಾರಗಳು, ಜನಪ್ರತಿನಿಧಿಗಳು ಸಂವಿಧಾನವನ್ನು ಬದಲಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸುತ್ತಿರುವುದು, ಕೆಲ ಮತೀಯ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿರಬಹುದು. ಎಲ್ಲ ಧರ್ಮಗಳ ಮೂಲ ಜೀವಾಳ ಮಾನವ ಪ್ರೀತಿಯೇ ಹೌದು. ಯಾವುದೇ ಧರ್ಮವು ತನ್ನ ಉಳಿವಿಗಾಗಿ ಅಥವಾ ಬೆಳವಣಿಗೆಗಾಗಿ ಇನ್ನೊಂದು ಧರ್ಮದ ಅವನತಿಯನ್ನು ಬಯಸುವುದಿಲ್ಲ. ಹಾಗೊಂದು ವೇಳೆ ಬಯಸಿದರೆ, ಅದು ಧರ್ಮ ಆಗುವುದಿಲ್ಲ. ಬಸ್, ರೈಲು, ವಿಮಾನಗಳಲ್ಲಿ ಪ್ರಯಾಣಿಸುವಾಗ ಯಾರ ಪಕ್ಕದಲ್ಲಿ ಯಾರು ಇದ್ದರೂ ಏನೂ ಅನಿಸುವುದಿಲ್ಲ.
ಒಬ್ಬ ವ್ಯಕ್ತಿ ತೀರಾ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ವ್ಯಕ್ತಿಯ ಧರ್ಮವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಿರುವಾಗ ಯಾವನೋ ಒಬ್ಬ ಕಿಡಿಗೇಡಿ ಅವಹೇಳನ ಮಾಡಿದರೆ, ಮನುಷ್ಯರ ನಡುವೆ ದ್ವೇಷದ ಜ್ವಾಲೆ ಹೊತ್ತಿಕೊಳ್ಳಲು ಬಿಡಬಾರದು. ಆರೋಪಿಯನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆಯಬೇಕು. ದೂರು ಬರುವವರೆಗೂ ಕಾಯಬಾರದು. ಇಂತಹ ಸನ್ನಿವೇಶದಲ್ಲಿ ಪೊಲೀಸರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವುದು ಆವಶ್ಯಕ. ಹಾಗೆಯೇ ಎಲ್ಲ ಧರ್ಮಗಳ ಜನಪ್ರತಿನಿಧಿಗಳೂ ಸಂವಿಧಾನದ ಆಶಯದಂತೆಯೇ ಮುನ್ನಡೆಯುವುದು ಕೇವಲ ಮೈಸೂರು ಮಾತ್ರವಲ್ಲದೇ ಇಡೀ ದೇಶದಲ್ಲೇ ಶಾಂತಿ, ಸೌಹಾರ್ದತೆ ನೆಲೆಸಲು ಸಹಕಾರಿಯಾಗುತ್ತದೆ. ಉದಯಗಿರಿ ಸೇರಿದಂತೆ ಇಡೀ ದೇಶ ಕುವೆಂಪು ಅವರ ಆಶಯದಂತೆ ‘ಸರ್ವಜನಾಂಗದ ಶಾಂತಿಯ ತೋಟ’ ಆಗುತ್ತದೆ.





