ಗೋಣಿಕೊಪ್ಪ: ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಜರ್ನಾಧನ ಅವರ ಪತ್ನಿ ಜಾನಕಿ (52) ಆನೆ ದಾಳಿಗೆ ಮೃತಪಟ್ಟ ದುರ್ದೈವಿ.
ಚೆನ್ನಂಗೊಲ್ಲಿಯ ಮನೆಯಪಂಡ ಕಾರ್ಯಪ್ಪ ಅವರ ಮಾನಿಕೊಪ್ಪ ಕಾಫಿ ತೋಟದಲ್ಲಿ ಗುರುವಾರ ಸಂಜೆ 4ರ ಸಮಯ ಕಾಫಿ ಕುಯ್ಲು ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಜಾನಕಿಯ ತಲೆ ಭಾಗವನ್ನು ತುಳಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೋಟದಲ್ಲಿ ಸುಮಾರು 30 ಕಾರ್ಮಿಕರು ಕಾಫಿ ಕುಯ್ಲಿನಲ್ಲಿ ತೊಡಗಿಸಿಕೊಂಡಿದ್ದರು. ಜಾನಕಿ ಹಾಗೂ ಲೀಲಾ ಎಂಬುವವರು ಕೊನೆಯದಾಗಿ ಕಾಫಿ ಬೀಜಗಳನ್ನು ಕಿತ್ತು ಬ್ಯಾಗಿನಲ್ಲಿ ತುಂಬಿ ಟ್ರ್ಯಾಕ್ಟರ್ ನಿಲ್ಲಿಸಿದ ಜಾಗಕ್ಕೆ ನಡೆದು ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಜಾನಕಿಯವರ ಮರಣೋತ್ತರ ಪರೀಕ್ಷೆಯನ್ನು ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮೂವರು ಪುತ್ರಿಯರು, ಅಳಿಯಂದಿರನ್ನು ಅಗಲಿದ್ದಾರೆ.
ಸ್ಥಳಕ್ಕೆ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಯಮುಡಿ ಗ್ರಾ.ಪಂ. ಆಪಟ್ಟೀರ ಟಾಟು ಮೊಣ್ಣಪ್ಪ ಭೇಟಿ ನೀಡಿದರು. ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.





