ಬಂಡೀಪುರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ರಸ್ತೆಗೆ ಬಂದ ಗಜರಾಜನ ಜೊತೆ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ಹುಚ್ಚಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡ ವ್ಯಕ್ತಿ ಈಗ ಅರಣ್ಯ ಇಲಾಖೆಗೆ ದಂಡ ಕಟ್ಟಿದ್ದಾರೆ.
ರಸ್ತೆಗೆ ಬಂದ ಕಾಡಾನೆಯನ್ನು ಕಂಡ ಪ್ರವಾಸಿಗರು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ತಿರುಗಿ ಬಂದ ಆನೆಯನ್ನು ಕಂಡು ಪ್ರವಾಸಿಗರು ವಾಪಸ್ ಆಗಿದ್ದರು.
ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರು ಪ್ರವಾಸಿಗರ ವಿರುದ್ಧ ಕಠಿಣ ಕ್ರಮ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪ್ರವಾಸಿಗರೊಬ್ಬರು ಅರಣ್ಯ ಇಲಾಖೆಗೆ 25 ಸಾವಿರ ದಂಡ ಕಟ್ಟಿ ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಬಂಡೀಪುರ ಅರಣ್ಯದಲ್ಲಿ ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಇದು ಕಾನೂನು ಬಾಹಿರ ಎಂದು ಗೊತ್ತಾದ ಮೇಲೆ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಈ ರೀತಿಯ ತಪ್ಪನ್ನು ಎಂದಿಗೂ ಮಾಡಲ್ಲ. ಯಾರೂ ಕೂಡ ಕಾಡು ಪ್ರಾಣಿಗಳಿಗೆ ಹಿಂಸೆ ಕೊಡಬೇಡಿ. ಕಾಡಿನೊಳಗೆ ಪ್ಲಾಸ್ಟಿಕ್‌ಗಳನ್ನು ಎಸೆಯಬಾರದು. ಪ್ರಾಣಿಗಳಿಗೆ ಕಿರಿಕಿರಿ ಉಂಟುಮಾಡಬಾರದು ಎಂದು ಹೇಳಿದ್ದಾರೆ.