ಮೈಸೂರು: ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ ಶಕ್ತಿ ತುಂಬಿದ ಮುಂಚೂಣಿ ಸಾಹಿತಿಗಳು ಪ್ರಬಂಧ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದರು ಎಂದು ಹಿರಿಯ ವಿದ್ವಾಂಸ ಪ್ರೊ.ಸಿ. ನಾಗಣ್ಣ ಅಭಿಪ್ರಾಯಪಟ್ಟರು.
ಬಿ.ಕೆ. ಮೀನಾಕ್ಷಿ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ‘ನಗುವಿನಿಬ್ಬನಿ ಮಿನುಗುತಿರಲಿ’ ಪ್ರಬಂಧ ಸಂಕಲನ ಕುರಿತು ಮಾತನಾಡಿದರು.
ಇಪ್ಪತ್ತನೇ ಶತಮಾನದಲ್ಲಿ ಈ ಪ್ರಕಾರವನ್ನು ಚೈತನ್ಯಗೊಳಿಸಿದ ಪುತಿನ, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಎ.ಎನ್. ಮೂರ್ತಿರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಾ. ಕಸ್ತೂರಿ, ವಿ. ಸೀತಾರಾಮಯ್ಯ, ಎಂ.ವಿ. ಸೀತಾರಾಮಯ್ಯ, ವಿ.ಕೃ. ಗೋಕಾಕ, ಹಾ.ಮಾ. ನಾಯಕ, ಎಂ.ಎಸ್. ಕಾಮತ್, ಶ್ರೀರಂಗ, ಎಚ್ಚೆಸ್ಕೆ, ತೀನಂಶ್ರೀ, ಸಿದ್ದವನಹಳ್ಳಿ ಕೃಷ್ಣ ಶರ್ಮ, ಎಚ್.ಎನ್. ನಾಗೇಗೌಡ ಮುಂತಾದವರನ್ನು ನೆನೆಯಲೇಬೇಕಾಗಿದೆ ಎಂದರು.
ಕನ್ನಡದ ಪ್ರಬಂಧ ಸಾಹಿತ್ಯ ಇಂಗ್ಲಿಷ್ ಪ್ರಬಂಧಕಾರರೆಲ್ಲರ ಚೈತನ್ಯವನ್ನುಂಡು ಬೆಳೆದಿದೆ. ನಂದಳಿಕೆ ನಾರಾಯಣಪ್ಪನೇ ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರದ ಪಿತಾಮಹ ಎಂದು ಗೋವಿಂದ ಪೈ ಹೇಳಿದ್ದಾರೆ. ಅದೇ ರೀತಿ ಬಿ.ವೆಂಕಚಾಚಾರ್ಯರ 1913 ರಲ್ಲಿ ಪ್ರಕಟವಾದ ‘ದಾದಿಯ ಹೇಳಿಕೆ’ ಪ್ರಬಂಧವೇ ಕನ್ನಡದ ಮೊದಲ ಲಲಿತ ಪ್ರಬಂಧ ಎಂಬ ವಾದವೂ ಇದೆ ಎಂದರು.
ಮೀನಾಕ್ಷಿಯವರ ಬರಹಗಳ ಮೊತ್ತವನ್ನು ಗಮನಿಸಿದರೆ ಪ್ರಬಂಧ ಅವರ ಒಲವಿನ ಪ್ರಕಾರವೆಂಬುದು ಸ್ಪಷ್ಟವಾಗುತ್ತದೆ. ದಶಕಗಳ ಕಾಲ ಚಿಕ್ಕ ಮಕ್ಕಳಿಗೆ ಪಾಠ ಹೇಳುತ್ತಲೇ ಬರಹವನ್ನು ಸೂಕ್ಷ್ಮಗೊಳಿಸಿಕೊಂಡಿರುವ ಅವರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಯುಕ್ತವಾದ ರೀತಿಯಲ್ಲಿ ಹೆಕ್ಕಿ ತೆಗೆದು ಅವುಗಳನ್ನು ಸಮಯೋಚಿತವಾಗಿ ಸಂಯೋಜನೆಗೊಳಿಸಿ ತಮ್ಮ ಪ್ರಬಂಧಗಳಿಗೆ ಜೀವ ತುಂಬಿದ್ದಾರೆ ಎಂದು ಅವರು ಶ್ಲಾಘಿಸಿದರು.
ಲಘು ಧಾಟಿಯ ಪ್ರಬಂಧಗಳಿಗೆ ವ್ಯಂಗ್ಯದ ದೃಷ್ಟಿ ಬಹಳ ಮುಖ್ಯ. ಇಲ್ಲಿಯ ಪ್ರಬಂಧಗಳಲ್ಲಿ ವ್ಯಂಗ್ಯದಲ್ಲಿ ಕುಹಕವಿಲ್ಲದಿದ್ದರಿಂದ ಅವು ಹಿತವಾಗುತ್ತವೆ. ಇಲ್ಲಿ 30 ಪ್ರಬಂಧಗಳಿದ್ದು, ಲವಲವಿಕೆ ಇದೆ. ಉಲ್ಲಾಸವಿದೆ. ಸಮಾಜದ ಅಂಕುಡೊಂಕು ತಿದ್ದುವ ಇರಾದೆಯಿದ್ದರೂ ಎಲ್ಲೂ ಕುಹಕದ ಕಹಿಯಿಲ್ಲ. ಔದಾರ್ಯದ ಮಸ್ಲಿನ್ ಬಟ್ಟೆಯನ್ನು ಎಲ್ಲರ ಮೇಲೂ ಹೊದಿಸಿದ ಅನುಭವವಾಗುತ್ತದೆ ಎಂದು ಅವರು ಹೇಳಿದರು.
ಸದಾ ನಿಮ್ಮೊಂದಿಗೆ’ ಅಂಕಣ ಬರಹಗಳನ್ನು ಕುರಿತು ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿರುವ ಲೇಖನಗಳು ಜ್ಞಾನದ ಜೊತೆಗೆ ವಿನಯವನ್ನು ಉದ್ದೀಪನಗೊಳಿಸುತ್ತವೆ. ಬಹುತೇಕ ಲೇಖನಗಳು ಪ್ರೀತಿ ಮೂಡಿಸುತ್ತವೆ. ಸಂದೇಶವನ್ನು ನೀಡುತ್ತವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೇಲುಕೋಟೆ ವಂಗೀಪುರದ ನಂಬೀಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಳೆಯ ಕಾಲದ ಓಲೆಗರಿ ಗ್ರಂಥಗಳನ್ನು ರಕ್ಷಿಸಬೇಕಾಗಿದೆ ಎಂದರು.
‘ಮೋನು ಮತ್ತು ಆನೆ’, ‘ಸದಾ ನಿಮ್ಮೊಂದಿಗೆ’ ಹಾಗೂ ‘ನಗುವಿನಿಬ್ಬನಿ ಮಿನುಗುತಿರಲಿ’ ಕೃತಿಗಳನ್ನು ಹಿರಿಯ ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ. ನಾಗರಾಜ ರಾವ್ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಬಿ.ಕೆ. ಮೀನಾಕ್ಷಿ ಅವರು ತಮ್ಮ ಪ್ರೌಢಶಾಲಾ ಶಿಕ್ಷಕಿ ದಾವಣಗೆರೆಯ ಕಮಲಮ್ಮ ದಂಪತಿಗೆ ಗುರುವಂದನೆ ಸಲ್ಲಿಸಿದರು.
ಪುಟಾಣಿ ಇಳಾ ‘ಮೋನು ಮತ್ತು ಆನೆ’ ಕತೆ ಹೇಳಿದರೆ, ಸಿ.ವಿ. ಧನ್ವ ಇಂಗ್ಲಿಷ್ ಕವನ ವಾಚಿಸಿದರು. ರಂಗನಾಥ್ ಮೈಸೂರು ಸ್ವಾಗತಿಸಿದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಉಷಾ ನರಸಿಂಹನ್ ನಿರೂಪಿಸಿದರು. ಎಚ್. ನಿವೇದಿತಾ ವಂದಿಸಿದರು.





