ಬೆಂಗಳೂರು: ಆರ್.ಅಶೋಕ್ ಅವರ ಸಿಎಂ ಬದಲಾವಣೆ ಹೇಳಿಕೆಗೆ ಸಂಬಂಧಿಸಿದಂತೆ, ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರಿಗೆ ಮಾನ ಮರ್ಯಾದೆಯೂ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ ಅವರು, ಆರ್.ಅಶೋಕ್ ಅವರ ಹೇಳಿಕೆಗೆ ಯಾವುದೇ ಬೆಲೆ ಇಲ್ಲ. ಅವರು ಗಾಳಿಗೆ ತೂರಿದ ಹಾಗೇ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗೆ ಜನರೇ ವಿರೋಧ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲೇ ಒಳ ಜಗಳ ತಾರಕಕ್ಕೇರಿದೆ. ಈಗಿರುವಾಗ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿದೆಯಾ? ಮಾನ ಮರ್ಯಾದೆ ಇದೆಯಾ? ಮೊದಲು ತಮ್ಮಲ್ಲಿನ ಸಮಸ್ಯೆ ಪರಿಹಾರ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಡಿಕೆ ಶಿವಕುಮಾರ್ ಸಿಎಂ ಎಂಬ ಶಾಸಕರ ಹೇಳಿಕೆ ಪ್ರತಿಕ್ರಿಯೆ ನೀಡಿ, ಈಗಾಗಲೇ ನಮ್ಮ ವರಿಷ್ಠರು ಈ ವಿಚಾರದ ಬಗ್ಗೆ ಯಾರು ಮಾತನಾಡಬಾರದು ಎಂದು ತಿಳಿಸಿದ್ದಾರೆ. ಆದ ಕಾರಣ ಈ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಮ್ಮ ಉದ್ದೇಶ ರಾಜ್ಯದ ಅಭಿವೃದ್ದಿ, ರಾಜ್ಯದ ಜನರ ಸಮಸ್ಯೆ ಪರಿಹಾರ ಮಾಡಬೇಕು. ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.



