Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

‘ಗ್ರಂಥಾಲಯದೆಡೆಗೆ ನಾನು ನನ್ನ ಸ್ನೇಹಿತರು’ ಅಭಿಯಾನದಡಿ ಓದು ಕಾರ್ಯಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಓದುವ ಬೆಳಕು ಕಾರ್ಯಕ್ರಮದಡಿ ಹಲವಾರು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವರು, ಫೆಬ್ರವರಿ ತಿಂಗಳಲ್ಲಿ ‘ಗ್ರಂಥಾಲಯದೆಡೆಗೆ ನಾನು ನನ್ನ ಸ್ನೇಹಿತರು’ ಅಭಿಯಾನದಡಿ ಗ್ರಾಮೀಣ ಪ್ರದೇಶದ ಎಲ್ಲಾ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಹಾಗೂ ಅರಿವು ಕೇಂದ್ರಗಳ ಉಪಯೋಗಗಳನ್ನು ಪಡೆಯಲು ಪ್ರೇರಿಪಿಸಲಾಗುವುದು ಎಂದು ಹೇಳಿದ್ದಾರೆ.

ನಾನು ಓದಿದ ಪುಸ್ತಕ ಚಟುವಟಿಕೆಯಡಿ ಅರಿವು ಕೇಂದ್ರದಿಂದ ಒಂದು ಪುಸ್ತಕವನ್ನು ಆಯ್ಕೆ ಮಾಡಿ ಓದಿ, ಪುಸ್ತಕದ ಬಗ್ಗೆ ಮುಕ್ತವಾಗಿ ಅಭಿಪ್ರಾಯವನ್ನು ಇತರೆ ಮಕ್ಕಳಿಗೆ ಹೇಳುವುದು, ಮಕ್ಕಳು ತಮ್ಮ ಅಜ್ಜ-ಅಜ್ಜಿಯರನ್ನು ಅರಿವು ಕೇಂದ್ರಕ್ಕೆ ಕರೆತರಲು ಪ್ರೋತ್ಸಾಹಿಸುವುದು, ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಅರಿವು ಕೇಂದ್ರಗಳಿಗೆ ಬರುವ ಮಕ್ಕಳಿಗೆ ವಿಜ್ಞಾನ ಕ್ಷೇತ್ರದ ಸಾಧನೆಗಳು, ವಿಜ್ಞಾನಿಗಳ ಪರಿಚಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಫೆಬ್ರವರಿ ತಿಂಗಳು ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಸಮಯವಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಸಿದ್ಧತೆ ಕುರಿತಂತೆ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರಿಂದ, ಹಿರಿಯರಿಂದ ಮಾರ್ಗದರ್ಶನ ಮತ್ತು ಆತ್ಮಸ್ಥೆರ್ಯ ತುಂಬುವ ಹಿತನುಡಿಗಳು ಹಾಗೂ ಪೋಷಕರು ಮತ್ತು ಮಕ್ಕಳೊಂದಿಗೆ ಸೌಹಾರ್ದ ಸಭೆ ನಡೆಸಲಾಗುವುದು ಎಂದು ತಿಳಿಸಿರುವ ಸಚಿವರು ಮಕ್ಕಳು ವ್ಯಾಸಂಗದಲ್ಲಿ ನಿರತರಾಗಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

Tags:
error: Content is protected !!