Mysore
21
clear sky

Social Media

ಬುಧವಾರ, 14 ಜನವರಿ 2026
Light
Dark

ಎಲ್ಲಿಯಾದರೂ ದೇವದಾಸಿ ಪದ್ಧತಿ ನಡೆದದ್ದು ಗಮನಕ್ಕೆ ಬಂದರೆ ಡಿಸಿ, ಎಸ್‌ಪಿ ಮುಲಾಜಿಲ್ಲದೇ ಕ್ರಮವಹಿಸಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಒಂದು ವೇಳೆ ಎಲ್ಲಿಯಾದರೂ ಈ ಪದ್ಧತಿ ನಡೆದದ್ದು ಗಮನಕ್ಕೆ ಬಂದರೆ ಮುಲಾಜಿಲ್ಲದೇ ಅವರ ವಿರುದ್ಧ ಕ್ರಮವಹಿಸಿ ಎಂದು ಡಿಸಿ ಮತ್ತು ಎಸ್‌ಪಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು(ಜನವರಿ.28) ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ. ಹೀಗಾಗಿ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ? ಈ ಬಗ್ಗೆ ವಿವರ ಕೊಡಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೀನಿಯರಿಟಿ ಲೀಸ್ಟ್ ಉಲ್ಲಂಘನೆ ಆಗಿ ಪರಿಶಿಷ್ಠರಿಗೆ ಅನ್ಯಾಯ ಆಗುತ್ತಿದೆ. ಸಮಿತಿ ಮುಂದೆ ದೂರು ಬಂದು ನಾವು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಏಕೆ ? ADGP ಅಡ್ಮಿನ್ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸಂಸದ ಈ.ತುಕಾರಾಮ್ ಮತ್ತು ಶಾಸಕ ನರೇಂದ್ರ ಸ್ವಾಮಿ ಅವರು ಸಭೆಯ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಸ್‌ ಅವರು ಈ ವಿಚಾರವನ್ನು ಮುಂದಿನ ಕ್ಯಾಬಿನೆಟ್‌ ತರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಬ್ಯಾಕ್ ಲಾಗ್ ಮತ್ತು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಬ್ ಕಮಿಟಿ ಪತ್ತೆ ಹಚ್ಚಿ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಹಾಗಾದರೆ ಸಬ್ ಕಮಿಟಿ ಕೊಡುವ ವರದಿಗಳಿಗೆ ಬೆಲೆ ಇಲ್ಲವೇ ಎಂದು ಸಭೆಯ ಗಮನಕ್ಕೆ ತಂದರು.

ಜಾತಿ ದೌರ್ಜನ್ಯ ದೂರು ಬಂದಾಗ ಪೊಲೀಸರೇ ಕೌಂಟರ್ ದೂರು ಪಡೆದು ಪ್ರಕರಣ ದುರ್ಬಲಗೊಳಿಸುವ ಬಗ್ಗೆ ದೂರುಗಳು ಬಂದರೆ ಅದನ್ನು ಸಹಿಸಲ್ಲ. ನಮ್ಮ ಗಮನಕ್ಕೆ ಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇನ್ನೂ ಎಲ್ಲಾ ಇಲಾಖೆಗಳೂ ಬಡ್ತಿಯಲ್ಲಿ ಮೀಸಲಾತಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಲ್ಲದೇ ಪರಿಶಿಷ್ಟ ಸಮುದಾಯದವರಿಗೆ ಅವಕಾಶ ತಪ್ಪಿಸಲು ಅಧಿಕಾರಿಗಳು ಕುಟಿಲ ನೀತಿ ಅನುಸರಿಸಿದರೆ ಸಹಿಸಲ್ಲ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ಸಭೆ ಕರೆಯಬೇಕು. ಜೊತೆಗೆ ಪ್ರತೀ ಆರು ತಿಂಗಳಿಗೊಮ್ಮೆ ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ. ಈ ಸಭೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನೂ ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇದ್ದರೆ ಪ್ರಾಸಿಕ್ಯೂಷನ್ ಜೊತೆ ಚರ್ಚಿಸಿ ಬೇಗ ಇತ್ಯರ್ಥ ಪಡಿಸಿಕೊಳ್ಳಬೇಕು. ಅಲ್ಲದೇ ನ್ಯಾಯದಾನಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Tags:
error: Content is protected !!