ನವದೆಹಲಿ: ಮುಂದಿನ ತಿಂಗಳು (ಫೆ.5) ನಡೆಯುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ʼಕೇಜ್ರಿವಾಲ್ ಕಿ ಗ್ಯಾರಂಟಿʼ ಎಂಬ ಹೆಸರಿನಲ್ಲಿ 15 ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಎಎಪಿ ಸಂಚಾಲಕ ಹಾಗೂ ಮಾಜಿ ಮುಖ್ಯಂಂತ್ರಿ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ(AAP) ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, ಉಚಿತ ನೀರು, ಉಚಿತ ವಿದ್ಯುತ್, ದಲಿತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಸ್ಕಾಲರ್‌ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್ ಇದು ಪ್ರಧಾನಿ ಮೋದಿ ಅವರ ʼನಕಲಿ ಗ್ಯಾರಂಟಿ ಅಲ್ಲʼ , ʼಕೇಜ್ರಿವಾಲ್ ಕಿ ಗ್ಯಾರಂಟಿʼ ಅಂತ ಹೇಳಿದ್ದಾರೆ.





