ಬೆಳಗಾವಿ: ಜಿಲ್ಲೆಯ ಶಹಾಪುರದ ಕಪಿಲೇಶ್ವರನಿಗೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು(ಜನವರಿ.19) ವಾಸ್ತವ್ಯ ಹೂಡಿದ್ದ ಸರ್ಕಾರಿ ಪ್ರವಾಸಿ ಕೇಂದ್ರದಿಂದ ನೇರವಾಗಿ ಕಪಿಲೇಶ್ವರ ದೇವಾಲಯಕ್ಕೆ ತೆರಳಿ, ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ.
ಶಿವಲಿಂಗಕ್ಕೆ ಪೂಜೆಯನ್ನು ನೆರವೇರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನೊಬ್ಬ ದೈವ ಭಕ್ತ. ದೈವಶಕ್ತಿ ನೆನಪಿಸಿಕೊಂಡೇ ತಮ್ಮ ನಿವಾಸದಿಂದ ಹೋಗುತ್ತೇನೆ. ಈ ಕಾರಣಕ್ಕೆ ಇಂದು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿರುವೆ. ಅಲ್ಲದೇ ನಿಮ್ಮಿಂದ ರಕ್ಷಣೆ ಬೇಕಾಗಿದೆ ಎಂದರು.
ಬಿಜೆಪಿ ಸದಸ್ಯತ್ವ ಹೊಂದಿರುವವರನ್ನು ಬಿಟ್ಟು, ಯಾರೂ ಬೇಕಾದರೂ ಸಮಾವೇಶಕ್ಕೆ ಬರಬಹುದು
ಇದೇ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಬಗ್ಗೆ ಮಾತನಾಡಿದ ಅವರು,
ಬೆಳಗಾವಿ ಜಿಲ್ಲೆಯಲ್ಲಿ ಜನವರಿ.21 ರಂದು ಸಮಾವೇಶ ಜರುಗಲಿದೆ. ಆ ಕಾರ್ಯಕ್ರಮಕ್ಕೆ ಬಿಜೆಪಿ ಸದಸ್ಯತ್ವ ಹೊಂದಿರುವವರನ್ನು ಬಿಟ್ಟು, ಯಾರೂ ಬೇಕಾದರೂ ಸಮಾವೇಶಕ್ಕೆ ಬರಬಹುದು. ಅಲ್ಲದೇ 21 ರಂದು ಸಮಾವೇಶಕ್ಕೆ ಆಗಮಿಸುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ವಿಮಾನದ ಮೂಲಕ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.
ನಾನು ಇಂದು ಸಂಜೆಯೊಮ್ಮೆ ಮತ್ತೊಂದು ಬಾರಿಗೆ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸುತ್ತೇನೆ. ಬಳಿಕ ಸಮಾವೇಶದ ಮುಂಚಿತವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಬಂದು ಪರಿಶೀಲನೆ ಮಾಡುತ್ತಾರೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ್ ಜಾರಕಿಹೊಳಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.





