ಮೈಸೂರು: ನನ್ನ ಮಗಳು ಮತ್ತು ಅಳಿಯ ಮುಡಾದಿಂದ 50:50 ಅನುಪಾತದ ಬದಲಿ ನಿವೇಶನಗಳನ್ನು ಪಡೆಯುವಾಗ ವೈಟ್ ಮನಿ ನೀಡಿ ನಿವೇಶನವನ್ನು ಖರೀದಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡಿದರೆ ಮಾಡಲಿ. ನನ್ನದೇನು ಅಭ್ಯಂತರವಿಲ್ಲ ಎಂದು ಶಾಸಕ ಜಿ.ಡಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.11) ಮುಡಾದಲ್ಲಿ ಅಕ್ರಮ ಪ್ರಭಾವ ಬೀರಿರುವ ಬಗ್ಗೆ ಸ್ನೇಹಮಯಿ ಕೃಷ್ಣ ದೂರು ನೀಡಿರುವ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾದಿಂದ ನನ್ನ ಮಗಳು ಮತ್ತು ಅಳಿಯ ವೈಟ್ ಮನಿ ನೀಡಿಯೇ ನಿವೇಶನವನ್ನು ಖರೀದಿಸಿದ್ದಾರೆ. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಮಗಳಿಗೆ ಕರೆ ಮಾಡಿ ಈ ವಿಷಯನ್ನು ತಿಳಿದುಕೊಂಡೆ ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರೆ ಸಂತೋಷ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ತನಿಖೆ ಆರಂಭಿಸಲಿ. ನಿವೇಶನ ಪಡೆದು ಮಾರಾಟ ಮಾಡಿದವರಿಗೆ ಮಾರಾಟ ಮಾಡುವ ಹಕ್ಕಿದೆ. ಹಾಗಾಗಿ ನನ್ನ ಮಗಳು ಯಾರ ಜೊತೆ ಮಾತನಾಡಿ ನಿವೇಶವನ್ನು ಪಡೆದಿದ್ದಾರೋ ತಿಳಿದಿಲ್ಲ. ಆದರೆ ನನ್ನ ಮೇಲಿರುವ ಪ್ರಭಾವ ಅಕ್ರಮ ಆರೋಪದ ತನಿಖೆಯಿಂದ ತಿಳಿಯಲಿದೆ ಎಂದು ಹೇಳಿದ್ದಾರೆ.
ಇನ್ನೂ ಮುಡಾ ವಿಚಾರದಲ್ಲಿ ನಾನು ತಪ್ಪು ಮಾಡಿದ್ದರೆ ಲೋಕಾಯುಕ್ತದಿಂದ ತನಿಖೆಯಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ ನನ್ನದೇನು ಅಭ್ಯಂತರವಿಲ್ಲ. ದೂರು ನೀಡಿರುವ ಸ್ನೇಹಮಯಿ ಕೃಷ್ಣ ನಮ್ಮ ಹುಡುಗನೇ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರು ನೀಡಿರುವ ದೂರಿನಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಸ್ನೇಹಮಯಿ ಕೃಷ್ಣ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ನಾಳೆ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಸಭೆಗೆ ನಾನು ಭಾಗಿಯಾಗಲ್ಲ
ಇದೇ ಸಂದರ್ಭದಲ್ಲಿ ನಾಳೆ(ಜನವರಿ.12) ನಡೆಯಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಆಯ್ಕೆ ಸಭೆ ಕುರಿತು ಮಾತನಾಡಿದ ಅವರು, ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಓಡಾಟ ಮಾಡುತ್ತಿದ್ದೇನೆ. ಈ ಕಾರಣಕ್ಕೆ ಸಭೆಯಾಗಿಲು ಸಾಧ್ಯವಾಗುತ್ತಿಲ್ಲ ಅಷ್ಟೇ. ಅದನ್ನು ಹೊರತು ಪಡಿಸಿದರೆ ನನಗೆ ಯಾವುದೇ ಬೇಸರವಿಲ್ಲ. ಇನ್ನೂ ದಿಶಾ ಸಭೆಗೆ ನಮ್ಮ ನಾಯಕರು ಬಂದಾಗ ಹೋಗಬೇಕಿತ್ತು. ಆದರೆ ಆರೋಗ್ಯ ಸರಿ ಇಲ್ಲದಿದ್ದರಿಂದ ನಾನು ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಿರಿಯರಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಯಾರನ್ನೂ ಆಯ್ಕೆ ಮಾಡುತ್ತಾರೆ, ಅವರೇ ಅಧ್ಯಕ್ಷರಾಗುತ್ತಾರೆ. ಜೊತೆಗೆ ನನ್ನ ಮಗ ಜಿ.ಡಿ. ಹರೀಶ್ ಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸ್ನೇಹಿತರಾಗಿದ್ದಾರೆ. ಆ ಕಾರಣಕ್ಕೆ ನಿಖಿಲ್ ರಾಜ್ಯಾಧ್ಯಕ್ಷರಾಗಲಿ ಅನ್ನೋ ಆಸೆ ವ್ಯಕ್ಯಪಡಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
2028ರ ವಿಧಾನಸಭೆ ಚುನಾವಣೆ ನಂತರ ನಾನೇ ಸಿಎಂ ಆಗುತ್ತೇನೆಂಬ ವಿಚಾರ
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, 2028ರ ವಿಧಾನಸಭೆ ಚುನಾವಣೆಯ ನಂತರ ನಾನು ಸಿಎಂ ಆಗುತ್ತೇನೆಂದು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಜಿ.ಡಿ.ದೇವೇಗೌಡರು, ಈ ರೀತಿ ಯಾರೇ ಹೇಳಿಕೆ ನೀಡಿದ್ದರೂ ಅದು ಭ್ರಮೆಯಾಗುತ್ತದೆ. ಏಕೆಂದರೆ 2028ಕ್ಕೆ ಏನಾಗುತ್ತೆ ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದರೆ ಸಾರ್ವಜನಿಕರು ಮತ ನೀಡಬೇಕು. ಅಲ್ಲದೇ ಶಾಸಕರೇ ಸಿಎಂ ಅನ್ನು ಆಯ್ಕೆ ಮಾಡಬೇಕು. ಹೀಗಿರುವಾಗ ನಾನೇ ಸಿಎಂ ಆಗುತ್ತೇನೆಂಬ ಹೇಳಿಕೆ ಭ್ರಮೆಯಾಗಿದೆ ಎಂದಿದ್ದಾರೆ.
2028ಕ್ಕೆ ಸಿಎಂ ಯಾರಾಗುತ್ತಾರೆಂದು ಹೇಳಲು ನಾನೇನು ಜೋತಿಷಿ ಅಲ್ಲ. ಆದರೂ ಈ ಹಿಂದೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸಿಎಂ ಆಗುತ್ತಾರೆಂದು ಹೇಳಿದ್ದೆ ಅಷ್ಟೇ. ಅಲ್ಲದೇ ಈಗ ನನಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಕೆಲವರು ಸಿಎಂ ಆಗಬೇಕೆಂಬ ಕಾರಣಕ್ಕೆ ಹಣ ಖರ್ಚು ಮಾಡಿ ಕಾದಿದ್ದಾರೆ. ಆದರೆ ನನ್ನ ಹಣ ಮತ್ತು ಆ ಶಕ್ತಿವಿಲ್ಲ ಎಂದು ಹೇಳಿದ್ದಾರೆ.





