Mysore
16
clear sky

Social Media

ಗುರುವಾರ, 09 ಜನವರಿ 2025
Light
Dark

ಸೈಕ್ಲೋನ್‌ ಪರಿಣಾಮ ಜನವರಿಯಲ್ಲೂ ಜಲ ಸಮೃದ್ಧಿ

ಮಂಡ್ಯ ಜಿಲ್ಲೆಯ 968 ಕೆರೆಗಳ ಪೈಕಿ 550 ಕೆರೆಗಳು ಈಗಲೂ ಭರ್ತಿ

ಹೇಮಂತ್‌ಕುಮಾರ್
ಮಂಡ್ಯ: ಜಿಲ್ಲೆಯಲ್ಲಿ ಕಳೆದ ಮೂರ‍್ನಾಲ್ಕು ತಿಂಗಳಿಂದ ಸೈಕ್ಲೋನ್ ಪರಿಣಾಮ ಸುರಿದ ಮಳೆಯಿಂದಾಗಿ ಅಂತರ್ಜಲ ಸಮೃದ್ಧವಾಗಿದ್ದು, ಜಲಾಶಯಗಳ ನೀರಿನ ಮಟ್ಟವೂ ಯಥಾಸ್ಥಿತಿಯಲ್ಲಿರುವಂತೆ, ಬಹುತೇಕ ಕೆರೆ-ಕಟ್ಟೆಗಳೂ ಪೂರ್ಣಮಟ್ಟ ಕಾಯ್ದುಕೊಂಡಿರುವುದು ಈ ವರ್ಷದ ವಿಶೇಷ.

ರೈತರ ಮೊದಲ ಸುಗ್ಗಿ ಹಬ್ಬವಾದ ಸಂಕ್ರಾಂತಿಗೆ ದನಕರುಗಳ ಮೈ ತೊಳೆಯಲು ನಾಲೆಗಳಿಗೆ ನೀರು ಬಿಡಿ ಎಂಬ ಒತ್ತಾಯ ಮಾಡುತ್ತಿದ್ದ ಸನ್ನಿವೇಶ ಈಗಿಲ್ಲ. ಕೆಆರ್ ಎಸ್ ಅಣೆಕಟ್ಟೆಯಲ್ಲಿ ಈಗಲೂ ಸಮೃದ್ಧವಾದ ಜಲರಾಶಿ ಇದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರ ಕೈಗೊಂಡಂತೆ ನಾಲೆಗಳಿಗೆ ೧೮ ದಿನಗಳು ನೀರು ಹರಿಸಿ ೧೨ ದಿನಗಳು ಸ್ಥಗಿತಗೊಳಿಸುವ ಮೂಲಕ ಕಟ್ಟು ನೀರು ಬಿಡಲಾಗುತ್ತದೆ.

ಜನವರಿ ತಿಂಗಳ ವೇಳೆಗೆ ಕೆರೆ-ಕಟ್ಟೆಗಳು ಅರ್ಧಮಟ್ಟಕ್ಕಿಂತ ಕೆಳಗಿರುತ್ತಿದ್ದ ಸನ್ನಿವೇಶದಲ್ಲಿ ೨೦೨೪ರಲ್ಲಿ ಜೂನ್‌ನಿಂದ ಇದುವರೆಗೆ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದ್ದು, ಈ ಜಲಸಂವೃದ್ಧಿಗೆ ಕಾರಣ. ಸರಾಸರಿ ೬೯೨ ಮಿ. ಮೀ. ವಾಡಿಕೆ ಮಳೆಯಿದ್ದು ೮೬೪ ಮಿ. ಮೀ. ನಷ್ಟು ಮಳೆ ಸುರಿದಿದೆ ಎಂದರೆ ಶೇ. ೨೫ರಷ್ಟು ಹೆಚ್ಚುವರಿಯಾಗಿದೆ. ಇದರ ಪರಿಣಾಮ ಸಾಕಷ್ಟು ಭತ್ತದ ಬೆಳೆ ಗದ್ದೆಯಲ್ಲೇ ಹಾಳಾಗಿ ರೈತನಿಗೆ ನಷ್ಟವುಂಟಾಗಿದೆ. ಇತ್ತ ಕಟಾವು ಮಾಡಿ ಭತ್ತವನ್ನು ಮೂಟೆಗೆ ತುಂಬಿದವರಿಗೆ ಸರಿಯಾದ ದರ ಸಿಗುತ್ತಿಲ್ಲ. ಹೀಗಿರುವಾಗ ಭತ್ತ ಖರೀದಿ ಕೇಂದ್ರವನ್ನು ಇನ್ನೂ ತೆರೆದಿಲ್ಲ. ಮಧ್ಯವರ್ತಿ ಗಳು ಕಡಿಮೆ ದರಕ್ಕೆ ಭತ್ತ ಕೇಳುತ್ತಾರೆ. ಅದಕ್ಕೂ ಬೇಡಿಕೆ ಇಲ್ಲ. ಹೀಗೆ ರೈತರಿಗೆ ಎರಡೂ ಕಡೆಯಿಂದ ನಷ್ಟವೇ ಆಗಿದೆ.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಕೆರೆಗಳು ತುಂಬಿರುವ ಬಗ್ಗೆ ನಿಖರ ಮಾಹಿತಿ ನೀಡಬೇಕು ಹಾಗೂ ನೀರು ತುಂಬಿಸಲು ಸಾಧ್ಯವಾಗದ ಕೆರೆಗಳಿಗೆ ಸಂಬಂಽಸಿದಂತೆ ಸರಿ ಯಾದ ಕಾರಣ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದ ೧೭೪ ಕೆರೆಗಳು, ಸಣ್ಣನೀರಾವರಿ ಇಲಾಖೆಯ ೪೮, ಪಿಆರ್‌ಇಡಿಯ ೪೧೭, ಪಾಂಡವಪುರ ಎಚ್‌ಲ್‌ಬಿಸಿಯ ೧೧೦, ನಾಗಮಂಗಲ ಎಚ್‌ಎಲ್‌ಬಿಸಿಯ ೬೪, ಕೆಆರ್. ಪೇಟೆ ಎಚ್‌ಎಲ್‌ಬಿಸಿಯ ೯೪ ಕೆರೆಗಳು ಸೇರಿದಂತೆ ಒಟ್ಟು ೯೬೮ ಕೆರೆಗಳಿದ್ದು, ಅವುಗಳಲ್ಲಿ ೫೪೮ ಕೆರೆಗಳು ಭರ್ತಿಯಾಗಿದ್ದರೆ, ೭೪ ಕರೆಗಳು ಶೇ. ೨೫ರಷ್ಟು ಮಾತ್ರ ನೀರು ಹೊಂದಿದೆ. ಮುಖ್ಯವಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈ ವರ್ಷ ೧೨೪. ೮೦ ಪೂರ್ಣಮಟ್ಟವನ್ನು ಕಾಯ್ದುಕೊಂಡಿರುವುದು ವಿಶೇಷ. ೪೯. ೪೫೨ ಟಿಎಂಸಿ ಗರಿಷ್ಟ ಮಟ್ಟವನ್ನು ಉಳಿಸಿಕೊಳ್ಳಲಾಗಿದೆ. ಹಾಗಾಗಿ ಈಗಿರುವ ನೀರು ಜೂನ್‌ವರೆಗೂ ಲಭ್ಯವಾಗುತ್ತದೆ ಎನ್ನಲಾಗಿದೆ.

ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಬಿದ್ದಿರುವುದನ್ನು ಹೊರತುಪಡಿಸಿದರೆ ಜೂನ್- ಜುಲೈ ತಿಂಗಳಲ್ಲಿ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಿದೆ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಶಾದಾಯಕವಾಗಿತ್ತು. ನಂತರ ಮುಂಗಾರು ಮಳೆ ಜಿಲ್ಲೆಯೊಳಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದ ಸನ್ನಿವೇಶ ಆತಂಕವುಂಟುಮಾಡಿತ್ತು.

ಸದ್ಯ ಅಂತರ್ಜಲ ವೃದ್ಧಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಮುಚ್ಚಿಹೋಗಿದ್ದ ಹಲವಾರು ಕಲ್ಯಾಣಿಗಳು, ಕಟ್ಟೆಗಳನ್ನೆಲ್ಲಾ ಅಮೃತ ಸರೋವರ ಯೋಜನೆಯಡಿ ಪುನಶ್ಚೇತನಗೊಳಿಸಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೂ ಜಿಲ್ಲಾ ಉಸ್ತುವರಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ವಿ ನಾಲೆ ಆರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೋ ಗೊತ್ತಿಲ್ಲ. ಅಲ್ಪಾವಽ ಬೆಳೆ ಬೆಳೆಯಲು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Tags: