Mysore
29
light rain

Social Media

ಬುಧವಾರ, 14 ಜನವರಿ 2026
Light
Dark

ಎಚ್‌ಡಿಕೆ ಶೇ.60 ರಷ್ಟು ಕಮಿಷನ್ ಆರೋಪ ಹೇಳಿಕೆ: ಆಧಾರವಿಲ್ಲದೆ ಆರೋಪಿಸಬಾರದು ಸಿಎಂ ಸಿದ್ದರಾಮಯ್ಯ

ದಾವಣಗೆರೆ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು 60% ಕಮಿಷನ್ ನಡೆಯುತ್ತಿದೆ ಎಂಬ ಆರೋಪ ಆಧಾರ ರಹಿತ. ಈ ಆರೋಪ ಗಾಳಿ ಗುಂಡು ಹಾರಿಸಿದಂತಿದ್ದು, ಆಧಾರವಿಲ್ಲದೆ ಆರೋಪಿಸಬಾರದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಗರದ ಎಂಬಿಎ ಗ್ರೌಂಡ್‌ನ ಹೆಲಿಪ್ಯಾಡ್‌ ಆವರಣದಲ್ಲಿ ಇಂದು(ಜನವರಿ.5) ಸರ್ಕಾರದ ವಿರುದ್ಧದ ಎಚ್‌ಡಿಕೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ಒಂದು ವೇಳೆ ಆರೋಪ ಮಾಡಿದರೆ ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಿಸಿರುವುದು ಇದೇ ಮೊದಲಲ್ಲ. ಎಲ್ಲಾ ಕಾಲದಲ್ಲಿಯೂ ಬಸ್ ದರಗಳು ಏರಿಕೆಯಾಗಿದೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬರವೂ ಆಗಿದೆ. ವರ್ಷಗಳ ಹಿಂದೆ ಬೆಲೆ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎನ್ನುವ ಕಾರಣಕ್ಕೆ ಹಾಗೂ ಬೇಡಿಕೆಯೂ ಇದ್ದುದ್ದರಿಂದ ಬೆಲೆಯೇರಿಸಲಾಗಿದೆ. ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕಾಲದಲ್ಲಿಯೂ ಬೆಲೆ ಹೆಚ್ಚಿಸಲಿಲ್ಲವೇ? ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ನಾವು ತಯಾರಿದ್ದೇವೆ

ಇದೇ ವೇಳೆ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ನಡೆದು ಐದು ವರ್ಷ ಕಳೆದಿರುವುದು ವಾಸ್ತವ ಸಂಗತಿ. ಆದರೆ ಈ ವಿಷಯ ನ್ಯಾಯಾಲಯದ ಮುಂದೆ ಹೋಗಿದೆ. ಹೀಗಾಗಿ ಪಂಚಾಯಿತಿ ಚುನಾವಣೆ ಪ್ರಕರಣ ಅಲ್ಲಿಯೇ ಇತ್ಯರ್ಥವಾಗಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ನಾವು ತಯಾರಿದ್ದು, ಆದರೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಒಳಮೀಸಲಾತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಇನ್ನೂ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಇತರೆ ಸಚಿವರು ಊಟಕ್ಕೆ ಸೇರುವುದೇ ತಪ್ಪೇ? ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಈಗಾಗಲೇ ಹೇಳಿದಂತೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

Tags:
error: Content is protected !!