ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದಿದ್ದರೆ ಜನವರಿ.4ರಂದು ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿಬಿಐಗೆ ವಹಿಸುವಂತೆ ಜನವರಿ.3ರವರೆಗೂ ಕಾಯುತ್ತೇವೆ. ಒಂದು ವೇಳೆ ಸಿಬಿಐಗೆ ವಹಿಸದಿದ್ದರೆ ಜನವರಿ.4ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ನಿಜವಾದ ಅಹಿಂದ ನಾಯಕ ಆಗಿದ್ದರೆ, ಪ್ರಕರಣವನ್ನು ಸಿಬಿಐಗೆ ನೀಡಿ ಮೃತ ಸಚಿನ್ ಪಾಂಚಾಳ ಕುಟುಂಬಕ್ಕೆ ನ್ಯಾಯ ಕೊಡಿಸಲಿ. ಆಗ ನಾವು ನಿಮ್ಮನ್ನು ನಿಜವಾದ ಅಹಿಂದ ನಾಯಕ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಇನ್ನು ನಮ್ಮ ಕಲಬುರ್ಗಿ ನಾಯಕರ ಕೊಲೆ ಬಗ್ಗೆ ಸಚಿನ್ ಡೆತ್‌ನೋಟ್‌ನಲ್ಲೇ ಉಲ್ಲೇಖವಾಗಿದೆ. ಸದನದಲ್ಲಿ ಎಲ್ಲಾ ಇಲಾಖೆಗಳ ಪ್ರಶ್ನೆಗೂ ಎದ್ದು ಉತ್ತರ ಕೊಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಳ ದೊಡ್ಡ ಜ್ಞಾನಿ. ಪ್ರಿಯಾಂಕ್ ಖರ್ಗೆ ಆಪ್ತನ ಕುಮ್ಮಕ್ಕಿನಿಂದಲೇ ಸಚಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.





