ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ಕೆ.ಎಂ ಹೇಳಿದರು.
ಇಂದು ಜೆ.ಎಲ್.ಬಿ. ರಸ್ತೆಯಲ್ಲಿರುವ ಮಹಾರಾಜ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಎಂಬುದು ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ ಎಂದರು.
ಎಲ್ಲಾ ಮಕ್ಕಳು ಶಾಲಾ ಮಟ್ಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಅವಕಾಶವನ್ನು ಪಡೆದುಕೊಂಡಿದ್ದೀರಾ. ಈ ಸದವಕಾಶವನ್ನು ಬಳಸಿಕೊಂಡು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತರಾಗಬೇಕು ಎಂದರು.
ವಿದ್ಯಾರ್ಥಿಗಳು ಪಠ್ಯಕ್ರಮಗಳನಷ್ಟೇ ಓದುವುದರ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಶಿಕ್ಷಕರೂ ಹಲವಾರು ಚಟುವಟಿಕೆಗಳ ಮೂಲಕ ನಿಮ್ಮಲ್ಲಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಹೇಳಿದರು.
ಹಲವಾರು ಮಕ್ಕಳು ಕೇವಲ ಶಿಕ್ಷಣವೆಂಬುದು ಅಂಕಕ್ಕೆ ಸೀಮಿತವಾಗಿದೆ ಎಂದು ಭಾವಿಸಿ ಅಂಕದ ಕಡೆಗೆ ಗಮನ ನೀಡಿ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸದೇ ಇರುತ್ತಾರೆ. ಈ ರೀತಿಯ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬಾರದು ಎಂದೆ ಶಿಕ್ಷಕರು ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದರು.
ಸಂಗೀತಾ, ನೃತ್ಯ, ಧಾರ್ಮಿಕ ಪಟಣ, ದೇಶಭಕ್ತಿ ಹಾಗೂ ಕ್ರೀಡಾ ಚಟುವಟಿಕೆಗಳು ಇವೆಲ್ಲವೂ ನಿಮ್ಮಲ್ಲಿರುವ ಕಲೆಯನ್ನು ಹೊರಗೆ ತೆಗೆದು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮಕ್ಕಳು ಸೋಲು ಗೆಲುವಿನ ಬಗ್ಗೆ ಯೋಚನೆ ಮಾಡದೆ ನಿಮ್ಮ ಪ್ರಯತ್ನಗಳನ್ನು ಮುಂದುವರಿಸುವುದರೆಡಿ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ರಾದ ಎಸ್ .ಟಿ ಜವರೇಗೌಡ ಅವರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರತಿಭಾ ಕಾರಂಜಿಯನ್ನು ಸುಮಾರು 10-15 ವರ್ಷದಿಂದ ಮಾಡಲಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದಾಗಿದೆ ಎಂದು ಹೇಳಿದರು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಂತಹ ಪ್ರತಿ ಮಕ್ಕಳಿಗೂ ಆಯಾ ಶಾಲೆಯ ಶಿಕ್ಷಕರು ನಿಯೋಜನೆಗಳನ್ನು ತಮ್ಮ ತಮ್ಮ ಶಾಲೆಗಳಲ್ಲಿ ನೀಡಬೇಕು. ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಎಲ್ಲಾ ಮಕ್ಕಳು ರಾಜ್ಯ ಮಟ್ಟಕ್ಕೆ ಹೋಗುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಬಿ ಸೋಮೇಗೌಡ ಮಾತನಾಡಿ, ಈ ದಿನ ವಿದ್ಯಾರ್ಥಿಗಳ ಹಬ್ಬಾ. ಸರ್ಕಾರವು ನಾಲ್ಕು ಗೋಡೆಗಳ ಮಧ್ಯೆ ಪಠ್ಯ ಕ್ರಮವನ್ನು ಆಯೋಜನೆ ಮಾಡಿಕೊಂಡು ಕಾಲ ಕಳೆಯುವುದು ಬೇಡ. ಮಕ್ಕಳು ಹೊರ ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಇಂಥಹ ಹಲವಾರು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಆಯೋಜಿಸಿ ಹೊಸ ಹೊಸ ಪ್ರತಿಭೆ ಗಳನ್ನೂ ಜಗತ್ತಿಗೆ ನೀಡುವ ಕೆಲಸ ಮಾಡುತ್ತಿದೆ ಎಂದರು.
ನೀವು ಮಾಡುವಂತಹ ಕೆಲಸಗಳು ನೀವು ಕೊಡುವಂತಹ ಪ್ರೀತಿ ವಿಶ್ವಾಸ ಹಾಗೂ ನಿಮ್ಮಲ್ಲಿರುವ ಪ್ರತಿಭೆಗಳು ನಮ್ಮನ್ನೇ ಹಿಂದಕ್ಕೆ ಜರಿಯುವಂತೆ ಮಾಡಿದೆ. ಅದಕ್ಕೆ ಕಾರಣ ನಮ್ಮ ವಿದ್ಯಾರ್ಥಿ ಬಳಗದಲ್ಲಿ ಅಡಗಿರುವಂತಹ ಪ್ರತಿಭೆ ಎಂದು ಹೇಳಿದರು.
ಪ್ರತೀ ಹಂತದಲ್ಲೂ ಒಂದು ಮಗು ಗಳಿಸುವ ಪ್ರಶಸ್ತಿಯ ಹಿಂದೆ ಶಿಕ್ಷಕರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹಾಗೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದನ್ನು ಮೊದಲು ಸಂತೈಸುವವರು ಶಿಕ್ಷಕರು. ಯವುದೇ ವಿಚಾರ ಕಲಿಕೆಯಾದರು ಅದನ್ನು ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದರು. ಕಾರ್ಯಕ್ರಮದಲ್ಲಿ ಗೆದ್ದಂತಹ ಮಕ್ಕಳು ಸೋತವರಿಗೆ ಬೆನ್ನು ತಟ್ಟಿ, ಸೋತ ಮಕ್ಕಳು ಗೆದ್ದವರಿಗೆ ಅಪ್ಪುಗೆಯನ್ನು ನೀಡಿ ಎಂದು ಹೇಳುತ್ತಾ, ಎಲ್ಲಾ ಮಕ್ಕಳೂ ರಾಜ್ಯ ಮಟ್ಟದಲ್ಲಿ ರಾರಾಜಿಸುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿಯಾದ ಎಂ.ಆರ್ ಅನಂತರಾಜು, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿ.ಎನ್ ರಾಜು, ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಹೇಶ್, ಮೈಸೂರು ಜಿಲ್ಲಾ ಘಟಕದ ಕ.ರಾ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷರಾದ ದುಂಡಯ್ಯ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಕ.ರಾ.ಎಸ್ .ಟಿ ಪ್ರಾಥಮಿಕದ ಅಧ್ಯಕ್ಷರಾದ ಟಿ.ಸಿ ಕೃಷ್ಣಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ (ಗ್ರೇಡ್-2)ಅಧ್ಯಕ್ಷರಾದ ರಾಜೇಂದ್ರ, ಅನುಪಾಲನ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.