ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್ ಮುಗಿದ ಅಧ್ಯಾಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಇಂದು(ಡಿಸೆಂಬರ್.23) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನ ಪರಿಷತ್ ಸದನದಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಈಗಾಗಲೇ ಕೂಲಂಕುಷವಾಗಿ ಚರ್ಚಿಸಲಾಗಿದೆ. ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ ವೇಳೆ ಬಂಧನ ಮಾಡಲಾಗಿದೆ. ಸದ್ಯ ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹೀಗಾಗಿ ಆ ವಿಚಾರ ಇನ್ನು ಮುಗಿದು ಹೋದ ಅಧ್ಯಾಯವಾಗಿದೆ. ಒಂದು ವೇಳೆ ಹಕ್ಕುಚ್ಯುತಿ ಆಗಿದೆ ಎಂದು ದೂರು ನೀಡಿದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸದನದ ಒಳಗೆ ನಡೆದ ಘಟನೆಯ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಏಕೆಂದರೆ ಪೊಲೀಸರಿಗೆ ಸದನ ಒಳಗೆ ಸ್ಥಳ ಮಹಜರು ಮಾಡುವ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಸಿ.ಟಿ.ರವಿ ವಿರುದ್ಧ ಹಲ್ಲೆ ನಡೆಸಿದವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಆದರೆ ಪೊಲೀಸರು, ಸಿ.ಟಿ.ರವಿ ಅವರನ್ನು ಬಂಧಿಸಲು ಸದನದ ಒಳಗೆ ಬಂದಿಲ್ಲ ಎಂದಿದ್ದಾರೆ.
ಸಿ.ಟಿ..ರವಿ ಬಂಧನವಾದ ಘಟನೆಯ ಬಗ್ಗೆ ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಅಲ್ಲದೇ ಈ ಘಟನೆಯ ಬಗ್ಗೆ ನಮ್ಮಲ್ಲಿ ವಿಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಆದರೆ ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣವಾಗಿಲ್ಲ. ಹೀಗಾಗಿ ಸಿ.ಟಿ.ರವಿ ಅವರ ಯಾವುದೇ ಹೇಳಿಕೆಗಳು ರೆಕಾರ್ಡ್ ಆಗಿಲ್ಲ. ಒಂದು ವೇಳೆ ಬೇರೆ ಯಾರಾದರೂ ಪರಿಶೀಲನೆಗಾಗಿ ಕಳುಹಿಸಿದರೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗದಿಂದ ನನಗೆ ಯಾವುದೇ ರೀತಿಯ ಪತ್ರ ಬಂದಿಲ್ಲ. ನನಗೆ ಪತ್ರ ಬರೆಯುವ ಅವಶ್ಯಕತೆಯೂ ಇಲ್ಲ, ಏಕೆಂದರೆ ಮಹಿಳಾ ಆಯೋಗ ನನಗೆ ಸೂಚನೆ ಕೊಡಲು ಸಾಧ್ಯವಿಲ್ಲ. ಅಲ್ಲದೇ ಮಹಿಳಾ ಆಯೋಗದ ದೂರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.