ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಬಾಡೂಟ ನೀಡಲೇಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು.
ಆದರೆ ಪ್ರತಿವರ್ಷದಂತೆ ಈ ಬಾರು ಕೂಡ ಸಸ್ಯಹಾರವನ್ನು ನೀಡಲಾಗುತ್ತಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಬಾಡೂಟ ಹಂಚಿಕೆ ಮಾಡಲಾಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆಗಾಗಿ ತೀವ್ರ ಜಟಾಪಟಿ ನಡೆದಿದ್ದು, ಪ್ರಗತಿಪರರು ಒಟ್ಟಾಗಿ ಸೇರಿ ಮೊಟ್ಟೆ, ಚಿಕನ್, ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಹಂಚಿಕೆ ಮಾಡಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಪ್ರಗತಿಪರರ ನಡುವೆ ವಾಗ್ವಾದ ಉಂಟಾದ ಘಟನೆ ಕೂಡ ನಡೆದಿದೆ. ಬಳಿಕ ಪೊಲೀಸರು ಮಾಂಸಹಾರವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಪ್ರಗತಿಪರರು ಮಾಂಸಾಹಾರ ವಿತರಣೆಗೆ ಪಟ್ಟು ಹಿಡಿದಿದ್ದರು.
ಈ ವಾದ ವಿವಾದಗಳ ನಡುವೆಯೇ ಪ್ರಗತಿಪರರು ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಕೌಂಟರ್‌ನಲ್ಲೇ ಮಾಂಸಾಹಾರ ವಿತರಣೆ ಮಾಡಿದ್ದಾರೆ.
ಇನ್ನು ಬಾಡೂಟ ಹಂಚಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತ್ಯಾಸಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇದು ಬಾಡೂಟಕ್ಕಾಗಿ ಹೋರಾಟ ಮಾಡುವ ಸ್ಥಳವಲ್ಲ. ಮಂಡ್ಯದಲ್ಲಿ ಬಾಡೂಟ ಫೇಮಸ್ ಎಂದು ಈ ಸ್ಥಳದಲ್ಲಿ ಹಂಚಿಕೆ ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸಮ್ಮೇಳನಕ್ಕೆ ಬಂದ ಸಾಹಿತ್ಯಾಸಕ್ತರಿಗೆ ಮುದ್ದೆ, ಸೊಪ್ಪಿನ ಸಾಂಬಾರ್, ಅನ್ನ, ರಸಂ, ಮಜ್ಜಿಗೆ, ಸಂಡಿಗೆ ಹಾಗೂ ಬಾದುಷಾವನ್ನು ಉಣಬಡಿಸಲಾಯಿತು.