Mysore
23
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮರ ಕಡಿಯದೆಯೇ ಕಾಗದ ತಯಾರಿಸುವ ಪೇಪರ್‌ ಪವಾರ್‌

ಕೀರ್ತಿ

ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ ಗೋಣಿ ಚೀಲ. . . ಹೀಗೆ ಅಡುಗೆ ಮನೆಯಿಂದ ಆರಂಭವಾಗಿ ನಿತ್ಯ ಉಪಯೋಗಿಸಿ, ಎಸೆಯುವ ವಸ್ತುಗಳಿಂದಲೇ ಇವರು ಕಾಗದ ತಯಾರಿಸುತ್ತಾರೆ. ಪ್ರಕೃತಿಯ ಪಾಠವನ್ನು ಅನವರತ ಹೇಳುತ್ತಾ, ಅದನ್ನು ಜೀವಸೂತ್ರದಂತೆ ಪಾಲಿಸುತ್ತಿದ್ದಾರೆ.

ಕೆಲ ದಶಕಗಳ ಹಿಂದೆ ದೇಶದಾದ್ಯಂತ ನಡೆಯುತ್ತಿದ್ದ ಕಾಗದ ಉತ್ಪಾದನೆಯ ಉಪನ್ಯಾಸಗಳಿಗಾಗಿ ಓಡಾಡುತ್ತಿದ್ದ ಲಕ್ಷ್ಮಣ್ ರಾವ್ ಅವರಿಗೆ ಬಿಡುವೆನ್ನುವುದೇ ಇರುತ್ತಿರಲಿಲ್ಲ. ಬದುಕೆಂದರೆ ಕಾಗದವೆಂಬಂತೆ ಜೀವಿಸುತ್ತಿದ್ದ ಇವರನ್ನು ಕಂಡ ಆಪ್ತ ವಲಯದ ಸ್ನೇಹಿತರು ‘ಪೇಪರ್ ಪವಾರ್’ ಎಂಬ ಹೆಸರಿಟ್ಟರು. ಈಗದು ಅನ್ವರ್ಥವಾಗಿ, ನಿಜ ಹೆಸರೇ ಮರೆಯುವಷ್ಟು ಜನಪ್ರಿಯವಾಗಿದೆ.

ಲಕ್ಷ್ಮಣ್ ಪವಾರ್ ಅವರ ಪರಿಸರ ಪ್ರೀತಿಯ ಹಿಂದೆ ಬದುಕಿನ ಕಥೆಯಿದೆ. ತಂದೆ ನಾರಾಯಣ ರಾವ್ ಅವರು ಹೆಡ್ ಮಾಸ್ಟರ್ ಆಗಿದ್ದರು. ಆಗ ಲಕ್ಷ್ಮಣ್ ಪವಾರ್ ಅವರು ಭದ್ರಾವತಿಯ ಶಾಲೆಯೊಂದರಲ್ಲಿ ಐದನೇ ತರಗತಿಯ ವಿದ್ಯಾರ್ಥಿ. ಅಲ್ಲಿನ ಪೇಪರ್ ಮಿಲ್‌ನಲ್ಲಿ ಬಿದಿರಿನಿಂದ ಕಾಗದ ತಯಾರಿಸುವುದನ್ನು ಕಂಡಿದ್ದರು. ಅಷ್ಟು ಹೊತ್ತಿಗಾಗಲೇ ಇವರ ತಂದೆ ಪರಿಸರ ಸ್ನೇಹಿ ಗುಡಿ ಕೈಗಾರಿಕೆ ಮಾಡುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದರು. ಶಿಕ್ಷಕ ವೃತ್ತಿಯ ಜೊತೆಗೆ ಜನಪರ ಕಾಳಜಿ ಇದ್ದ ತಂದೆಯ ವ್ಯಕ್ತಿತ್ವ ಅಕ್ಷರಶಃ ಈ ಮಗನನ್ನು ಪ್ರಭಾವಿಸಿತು. ‘ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ನಾವೇ ನಾಲ್ಕು ಜನರಿಗೆ ಕೆಲ್ಸ ಕೊಡ್ಬೇಕಪ್ಪಾ’ ಎಂದು ತಂದೆ ಹೇಳುತ್ತಿದ್ದ ಮಾತುಗಳೇ ಇವರ ಬದುಕಿನ ಆದರ್ಶ.

ಬ್ರಿಟಿಷರ ಕಾಲದಲ್ಲಿ ಪಾಶ್ಚಾತ್ಯ ದೇಶಗಳಿಂದ ಭಾರತ ಕಾಗದವನ್ನು ಆಮದು ಮಾಡಿಕೊಳ್ಳುತ್ತಿತ್ತು. ಗಾಂಽಜಿ ಅವರು ಗ್ರಾಮೀಣ ಜನರಿಗೆ ಕಾಗದವನ್ನು ತಾವೇ ಸ್ವತಃ ಉತ್ಪಾದಿಸುವಂತೆ ಸಲಹೆ ನೀಡುತ್ತಾ, ದೇಶದಲ್ಲಿ ಸೃಷ್ಟಿಯಾಗಬಹುದಾಗಿದ್ದ ಉದ್ಯೋಗ ಅವಕಾಶಗಳೆಡೆಗೆ ಕಣ್ಣಾಯಿಸಿದ್ದರು. ಈ ಸಲುವಾಗಿ ಜನರಿಗೆ ಸೂಕ್ತ ಮಾರ್ಗದರ್ಶನ ಸಿಗಲೆಂದು ಪುಣೆಯಲ್ಲಿ ಗುಡಿ ಕೈಗಾರಿಕೆಗೆ ಸಂಬಂಧಿಸಿದಂತೆ ಶೈಕ್ಷಣಿಕ ಸಂಸ್ಥೆಯನ್ನು ತೆರೆದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಲಕ್ಷ್ಮಣ್ ಪವಾರ್ ಅವರು ಅದೇ ಕಾಲೇಜಿನಲ್ಲಿ ೧೭ ತಿಂಗಳ ಪೇಪರ್ ಮ್ಯಾನೇಜ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದರು.

ಮಗನ ಕಾಗದ ತಯಾರಿಕಾ ಉದ್ಯಮಕ್ಕೆ ಸೂರು ಕಟ್ಟಬೇಕೆಂಬುದು ನಾರಾಯಣ ರಾವ್ ಅವರ ಕನಸಾಗಿತ್ತು. ಆದರೆ ೧೯೭೯ರಲ್ಲಿ ತಂದೆ ಅವರು ತೀರಿದ ಮೇಲೆ ಉದ್ಯಮ ಕಟ್ಟಬೇಕೆಂಬ ಉತ್ಸಾಹವಾಗಲೀ ಆರ್ಥಿಕ ಬಲವಾಗಲೀ ಲಕ್ಷ್ಮಣ್ ಅವರಿಗಿರಲಿಲ್ಲ.

ಎರಡು ವರ್ಷಗಳು ಕಳೆಯುತ್ತಾ, ಪರಿಸ್ಥಿತಿ ತಿಳಿಯಾಗುತ್ತಲಿತ್ತು. ಸಂಬಂಧಿಯಾಗಿದ್ದ ಮಾಧವಿ ಅವರನ್ನೇ ಮದುವೆಯಾದರು. ಇಂತಹ ಸಂಕಷ್ಟದ ಸಮಯದಲ್ಲಿ ಮಾವ ವೆಂಕಟರಾವ್ ಕದಂ, ಅತ್ತೆ ಲಕ್ಷ್ಮೀ ಬಾಯಿ ಅವರಿಬ್ಬರೂ ಕಾಗದ ಉದ್ಯಮ ಕಟ್ಟುವುದಕ್ಕೆ ನೀಡಿದ ಆರ್ಥಿಕ ಸಹಕಾರವನ್ನು ಪವಾರ್ ಅವರು ಇಂದಿಗೂ ಮರೆತಿಲ್ಲ. ಸಹೋದರರಾದ ಪಾಂಡುರಂಗ ಮತ್ತು ಶಿವಾಜಿ ಅವರು ನೈತಿಕ ಶಕ್ತಿಗಳಾಗಿ ಇವರ ಜೊತೆಗಿದ್ದರು. ಉದ್ಯಮದ ಆರಂಭಿಕ ದಿನಗಳಲ್ಲಿ ಭತ್ತದ ಹುಲ್ಲಿನಿಂದ ಪರೀಕ್ಷೆ ಬರೆಯುವ ರಟ್ಟು ತಯಾರಿಸುತ್ತಿದ್ದರು. ಕೃಷಿ ಕಸದಿಂದಲೇ ಕಾಗದ ಕೈಗಾರಿಕೆಯನ್ನು ಆಶ್ರಯಿಸಿದ್ದ ಇಪ್ಪತ್ತೈದು ಜೀವಗಳ ಬದುಕು ರಸವಾಗುತ್ತಿದ್ದ ಕ್ಷಣಗಳವು!

ಹಾಗೆಂದು ಕಾಯಕ ಆರಾಮವಾಗಿರಲಿಲ್ಲ. ಆಗೆಲ್ಲ ವಿದ್ಯು ಚ್ಛಕ್ತಿಯ ಸಮಸ್ಯೆ ಇದ್ದದ್ದರಿಂದ, ರಾತ್ರಿ ನಿದ್ರೆಗೆ ಒಂದು ಗಂಟೆ ಯಷ್ಟೇ ಮೀಸಲು. ಕೇವಲ ಆರು ಗಂಟೆಯೊಳಗೆ ವಿದ್ಯುತ್ ಅಗತ್ಯವಿರುವ ಕೆಲಸಗಳನ್ನು ಮಾಡಿಕೊಂಡು, ಬಾಕಿ ಉಳಿದ ಸಂದರ್ಭದಲ್ಲಿ ಕೈ-ಕೆಲಸಗಳನ್ನು ಮುಗಿಸಿಕೊಳ್ಳಬೇಕಿತ್ತು.

ಒಮ್ಮೆ ಭತ್ತದ ಹುಲ್ಲು ಮತ್ತು ಪಾರ್ಥೇನಿಯಂ ಗಿಡಗಳ ಹುಲ್ಲಿನಲ್ಲಿ ಕಾಗದ ತಯಾರಿಸಬಹುದಾ? ಎಂದು ಪರೀಕ್ಷಿಸುತ್ತಿದ್ದರು. ಪಾರ್ಥೇನಿಯಂ ಗಿಡದ ಹುಲ್ಲು ಕಾಗದ ತಯಾರಿಸುವುದಕ್ಕೆ ಅಷ್ಟು ಸೂಕ್ತವಾಗಿರಲಿಲ್ಲ. ಹೀಗೆ ನಿರಂತರ ಪ್ರಯೋಗಗಳು ಸಾಗುತಿದ್ದವು. ತನ್ನೊಂದಿಗೆ ಶ್ರಮಜೀವಿಗಳಾಗಿದ್ದ ಎಲ್ಲಾ ಸಹೋದ್ಯೋಗಿಗಳು ಸಂಸ್ಥೆಗಾಗಿ ದುಡಿದಿದ್ದರೆನ್ನುತ್ತಾ, ಬರಿಯ ಕೆಲಸಗಾರರಷ್ಟೇ ಆಗಿರಲಿಲ್ಲ. ಇಪ್ಪತ್ತ್ತ್ಯೈದು ಜನರೂ ನನ್ನ ಕುಟುಂಬವೇ ಆಗಿದ್ದರು ಎಂದು ತಮ್ಮ ತೃಪ್ತ ದಿನಗಳನ್ನು ನೆನೆಯುತ್ತಾರೆ. ‘ಬಿಸಾಕೋ ಕಸದಲ್ಲಿ ಪೇಪರ್ ಮಾಡ್ತಾನಂತೆ’ ಎಂದು ಊರ ಜನರೆಲ್ಲ ಆಡಿಕೊಂಡವರೇ.

ಮೊದಮೊದಲು ಬೇಸರಿಸುತ್ತಿದ್ದರೂ, ತಮ್ಮ ಕೆಲಸದ ಬಗೆಗಿನ ಶ್ರದ್ಧೆ ಮತ್ತು ಕಾರ್ಯದೊತ್ತಡದ ನಡುವೆ ಇಂತಹ ಮಾತುಗಳಿಗೆ ಮನಗೊಡಲಿಲ್ಲ. ಪರಿಣಾಮವೆಂಬಂತೆ, ಲಕ್ಷ್ಮಣ್ ಪವಾರ್ ಅವರು ದಕ್ಷಿಣ ಭಾರತದ ಅಖಿಲ ಭಾರತ ಕೈ ಕಸುಬು ಉದ್ಯಮಗಳ ಸಂಘದ ನಿರ್ದೇಶಕರಾದರು. ದೆಹಲಿ, ಬಾಂಬೆ, ಕೊಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪವಾರ್ ಅವರು ತಯಾರಿಸಿದ ಕಾಗದಗಳು ರಫ್ತಾಗುತ್ತಿದ್ದವು. ಆದರೆ ಆಧುನಿಕತೆಯ ಭರಾಟೆಯಲ್ಲಿ ಕಾಗದ ಉದ್ಯಮಕ್ಕೆ ಬಿದ್ದ ಕೊಡಲಿ ಏಟು ಮಾತ್ರ ಪವಾರ್ ಅವರ ಕಾಗದ ಗುಡಿ ಕೈಗಾರಿಕೆಯ ವ್ಯವಹಾರವನ್ನೇ ನಿಲ್ಲಿಸಿತು. ವಿಶೇಷವೆಂದರೆ, ಬದುಕು ಬಂದಂತೆ ಸ್ವೀಕರಿಸುವ ಗುಣದವರಾದ ಲಕ್ಷ್ಮಣ್ ರಾವ್ ಅವರು ನಾಡಿನಾದ್ಯಂತ ಕಾಗದ ಉತ್ಪಾದನೆಯ ಕುರಿತ ಕಾರ್ಯಕ್ರಮ, ಕಾರ್ಯಾಗಾರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾ, ಸಂತೋಷದಿಂದ ಬದುಕು ಸಾಗಿಸುತ್ತಿದ್ದಾರೆ. ನಾವೆಲ್ಲ ಸ್ವಾವಲಂಬಿ ಜೀವನವನ್ನು ಬಹಳ ಸರಳವಾಗಿ ಬದುಕಬಹುದು ಎನ್ನುತ್ತಾರೆ ಪವಾರ್ ಅವರು.

ಹಿಂದೆ ಕಾಗದ ತಯಾರಿಸುವಾಗ ಶೇಖರವಾಗುತ್ತಿದ್ದ ಕೊಳಕು ನೀರನ್ನು ಗಿಡಗಳಿಗೆ ಹಾಯಿಸಿದ್ದರಿಂದ ಇಂದಿಗೂ ಅವು ಫಲ ನೀಡುತ್ತಿವೆ. ಸಾಕ್ಷಿಗೆಂದು ಕೈ ಚಾಚಿದ್ದು, ಬೆಳೆದು ನಿಂತ ತೆಂಗಿನ ಮರಗಳೆಡೆಗೆ! ಇತ್ತೀಚೆಗೆ ಕಾಗದ ಉದ್ಯಮ ವಾಣಿಜ್ಯಗೊಂಡ ಬಗ್ಗೆ ಪವಾರ್ ಅವರಿಗೆ ಬೇಸರವಿದೆ. ಒಂದು ಟನ್ ಕಾಗದ ತಯಾರಿಕೆಗೆ ಎರಡೂವರೆ ಟನ್‌ಗಳಷ್ಟು ಮರಗಳನ್ನು ನೆಲಕ್ಕುರುಳಿಸುತ್ತಾರೆ. ಮರ ಕಡಿಯದೇ ಕಾಗದ ತಯಾರಿಸುವ ಅನುಕೂಲಗಳಿದ್ದರೂ ಉದ್ಯಮಿಗಳು ಸುಲಭ ಮಾರ್ಗ ಅನುಸರಿಸುತ್ತಿದ್ದಾರೆ. ಗಾಜು, ಲೋಹ, ಪ್ಲಾಸ್ಟಿಕ್ ಮತ್ತು ಕಲ್ಲು ಇವಿಷ್ಟನ್ನು ಪಕ್ಕಕ್ಕಿಟ್ಟರೆ ಇನ್ನುಳಿದ ಎಲ್ಲಾ ವಸ್ತುಗಳಿಂದ ಕಾಗದ ತಯಾರಿಸಬಹುದು. you can create entire universe out of paper ಎಂಬುದು ಪವಾರ್ ಅವರ ಅಭಿಪ್ರಾಯ. ಲಕ್ಷಾಂತರ ಮರಗಳನ್ನು ಕಡಿಯದೇ ಕಾಗದ ಉತ್ಪಾದಿಸಬಹು ದೆಂಬುದಕ್ಕೆ ಪೇಪರ್ ಪವಾರ್ ಅವರೇ ನೈಜ ನಿದರ್ಶನ.

 

Tags: