Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕನ್ನಡದ ಲೇಖಕಿ

ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ ಸಣ್ಣ ಮನೆಯಲ್ಲಿ ಎಲ್ಲವನ್ನೂ ಸೆಟ್ ಮಾಡಿ ಮುಗಿಸುವುದರೊಳಗೆ ಸುಸ್ತಾಗಿ ಹೋಗಿತ್ತು. ಮೊದಲೇ ಅಲ್ಲಿ ನರಕದ ಚಳಿ. ಮನೆಯೊಳಗೆ ಹೀಟರ್ ಇಲ್ಲದೆ ಬದುಕುವುದು ಅಸಾಧ್ಯ. ಆದರೆ ಮನೆಯಿಂದಾಚೆ ಕಾಲಿಟ್ಟೆವೆಂದರೆ ಕೈ ಕಾಲುಗಳು ಸೆಟೆದು ಹೋಗುತ್ತಿದ್ದವು. ಜಾಕೆಟ್ ಹಾಕದೆ ಮನೆಯಿಂದ ಆಚೆ ಕಾಲಿಡುವಂತಿಲ್ಲ. ಅದೇನೇ ಇದ್ದರೂ ಮುಖವಂತೂ ತೆರೆದೇ ಇರುತ್ತಿತ್ತಲ್ಲ. ಅರೆಕ್ಷಣದಲ್ಲಿ ಮುಖದಲ್ಲಿ ರಕ್ತಸಂಚಾರವೇ ಇಲ್ಲದೆ ಮರಗಟ್ಟಿ ಹೋದಂಥ ಅನುಭವವಾಗುತ್ತಿತ್ತು. ಮೊದಲೇ ಮನೆಹುಳುವಾದ ನಾನು ಮನೆಯಲ್ಲಿ ಸುಖವಾಗಿ ಸೆಟಲ್ ಆಗಿಬಿಟ್ಟೆ. ನನ್ನ ಮಗನಿಗೋ ನಾನು ಹೊರಗೆ ಓಡಾಡಬೇಕು, ವಾಕ್ ಮಾಡಬೇಕು, ಕೆಫೆಗಳಿಗೆ ಹೋಗಿ ಕಾಫಿ ಕುಡಿಯಬೇಕು ಅಂತೆಲ್ಲ ಇಷ್ಟ. ನಾನು ‘ಅಯ್ಯೋ ಹೋಗಪ್ಪ ಯಾರಿಗೆ ಬೇಕು ಈ ಚಳಿಯಲ್ಲಿ ಆಚೆ ಹೋಗುವುದು’ ಅಂತ ಅಲ್ಲಾಡಲೇ ಇಲ್ಲ. ಇದು ಬಗ್ಗುವ ಆಸಾಮಿಯಲ್ಲ ಅಂತ ಒಂದು ದಿನ ‘ಹೋಗಲಿ ಕೆಳಗೆ ಲೀಸಿಂಗ್ ಆಫೀಸ್ ಇದ್ಯಲ್ಲ, ಅಲ್ಲಿ ನಾವು ಆರ್ಡರ್ ಮಾಡಿದ ಒಂದೆರಡು ಪಾರ್ಸೆಲ್ ಬಂದಿದೆ. ಅದನ್ನಾದರೂ ಹೋಗಿ ತಗೊಂಡು ಬಾ’ ಅಂತ ಬೆನ್ನು ಬಿದ್ದ. ಒಂದು ಪಾರ್ಸಲ್ ತರಲಾದರೂ ಜಾಕೆಟ್, ಟೋಪಿ. . . ಅಂತ ಶುರುವಾಗುತ್ತದೆ. ನಾನು ಹೋಗಲ್ಲ ಅನ್ನಲು ಹೊರಟವಳು, ವಾಕಿಂಗ್ ಹೋಗು ಅನ್ನಲಿಲ್ಲವಲ್ಲ ಹೋಗಲಿ ಇದಕ್ಕಾದರೂ ಹೋಗಿ ಬರೋಣವೆಂದು ಸಿದ್ಧಳಾದೆ.

ಮನೆಯ ಪಕ್ಕದಲ್ಲಿ ಇರುವ ಲಿಫ್ಟ್ ಅಲ್ಲಿಗೆ ಹೋಗುತ್ತದಾದರೂ, ಆ ಕಡೆಗಿರುವ ಲಿಫ್ಟ್ ಪಾರ್ಸಲ್ ಇಡುವ ಜಾಗಕ್ಕೆ ಹತ್ತಿರ ಅಂದ. ೨೦ ಹೆಜ್ಜೆ ನಡೆದು ಆ ಕಡೆಯ ಲಿಫ್ಟ್ ಬಳಿ ಬಂದೆ. ಬಟನ್ ಒತ್ತಿದ ನಿಮಿಷಕ್ಕೆಲ್ಲ ಲಿಫ್ಟ್ ಬಂತು. ಅದರಲ್ಲಿ ಒಬ್ಬರು ವಯಸ್ಸಾದ ಏಷಿಯನ್ ಹೆಂಗಸು ಇದ್ದರು. ನಮ್ಮ ದೇಶದಲ್ಲಾದರೆ ನಮ್ಮನ್ನು ಬಿಟ್ಟು ಉಳಿದವರೆಲ್ಲ ‘ಫಾರಿನರ್ಸ್’! ಅಮೆರಿಕದಲ್ಲಿ ಜಗತ್ತಿನ ಎಲ್ಲ ದೇಶಗಳ ಜನರೂ ಬೀಡು ಬಿಟ್ಟಿರುವುದರಿಂದ ನಾನು ಮೊದಲಲ್ಲಿ ಜಪಾನಿನವರನ್ನು ಚೈನೀಸ್ ಅಂದು, ಚೈನಾದವರನ್ನು ಕೊರಿಯನ್ ಅಂದು ಚಿತ್ರಾನ್ನ ಮಾಡುವಾಗ ಮಗ ‘ಅವರನ್ನೆಲ್ಲ ಏಷಿಯನ್ಸ್ ಅನ್ನಬೇಕು’ ಅಂತ ಹೇಳಿಕೊಟ್ಟಿದ್ದ. ಹಾಗಾಗಿ ಇಷ್ಟೆಲ್ಲ ಸೊಫಿಸ್ಟಿಕೇಷನ್ನು. ಸರಿ ಲಿಫ್ಟ್ ಒಳಗೆ ಸೇರಿದೆ, ಬಾಗಿಲು ಮುಚ್ಚಿತು. ಗ್ರೌಂಡ್ ಫ್ಲೋರ್ ಅಂತ ಒತ್ತಿ ಆಗಿದ್ದರಿಂದ ಸುಮ್ಮನೆ ನಿಂತೆ. ಒಂದಿಷ್ಟು ಸೆಕೆಂಡುಗಳು ಕಳೆದವು. ಲಿಫ್ಟ್ ನಿಂತಲ್ಲಿಂದ ಕದಲಲಿಲ್ಲ! ಮತ್ತೆ ಬಟನ್ ಒತ್ತಿದೆ. . . ಉಹು ಅಲುಗಾಟವಿಲ್ಲ. ಬಾಗಿಲು ತೆರೆಯುವ ಬಟನ್ ಒತ್ತಿದೆ. ಮತ್ತೊಂದು ಲಿಫ್ಟ್‌ನಲ್ಲಿ ಹೋದರಾಯಿತು ಅಂತ. ಬಾಗಿಲು ತೆರೆಯಲೇ ಇಲ್ಲ! ಮೊದಲೇ ಇಕ್ಕಟ್ಟಿನ ಜಾಗವೆಂದರೆ ಪ್ರಾಣಭಯವಿರುವ ನಾನು ಬೆವರಲು ಪ್ರಾರಂಭಿಸಿದೆ.

ಮಗನಿಗೆ ಕರೆ ಮಾಡಿ ‘ಲಿಫ್ಟ್ ಕೆಟ್ಟೋಗಿದೆ. ಬಾಗಿಲು ತೆಗೆಯಕ್ಕಾಗ್ತಿಲ್ಲ’ ಅಂದೆ ಗಾಬರಿಯಲ್ಲಿ. ‘ಇರು ಒಂದು ನಿಮಿಷ ಬಂದೆ’ ಅಂದ. ಹೊರಗಿನಿಂದ ಬಾಗಿಲು ತೆರೆಯಬಹುದು ಅನ್ನುವ ನಿರೀಕ್ಷೆಯಲ್ಲಿ ಮಗನಿಗೆ ಕಾಯುತ್ತಿರುವಾಗಲೇ ಪಕ್ಕದಲ್ಲಿದ್ದ ಹೆಂಗಸು ‘ಏನಾಗಲ್ಲ ಈ ಕಡೆ ಲಿಫ್ಟ್ ಆಗಾಗ ಕೆಟ್ಟೋಗೋದು ಮಾಮೂಲು’ ಅಂದರು ಶಾಂತವಾಗಿ! ಮಾಮೂಲಾ! ! ಅಯ್ಯೋ ದೇವರೇ ಈ ಲಿಫ್ಟ್ ಕಡೆ ಯಾಕಾದರೂ ನನ್ನ ಕಳಿಸಿದ್ಯೋ ಅಂತ ಮನಸ್ಸಿನಲ್ಲೇ ಗೋಳಾಡಲು ಪ್ರಾರಂಭಿಸಿದೆ. ಜೋರಾಗಿ ಗೋಳಾಡಬಹುದಿತ್ತು.. . ಆದರೆ ಆ ಹೆಂಗಸು ಅಷ್ಟು ಶಾಂತವಾಗಿರುವಾಗ ನಾನೊಬ್ಬಳೇ ಹೇಗೆ ಗೋಳಾಡುವುದು! ಅಷ್ಟರಲ್ಲಿ ಮಗ ಲಿಫ್ಟ್ ಹತ್ತಿರ ಬರುವುದು ಕಾಣಿಸಿತು.

ಇನ್ನು ಕಾಪಾಡುತ್ತಾನೆ ಬಿಡು ಅಂತ ನಿಂತೆ. ಆದರೆ ಅವನು ಬಂದು ಒತ್ತಿದರೂ ಲಿಫ್ಟ್ ಬಾಗಿಲು ತೆರೆಯಲೇ ಇಲ್ಲ! ಬೆವರು ದಳದಳ ಹರಿಯುವಾಗಲೇ ಆ ಹೆಂಗಸು ‘ಎಮರ್ಜೆನ್ಸಿಗೆ ಕಾಲ್ ಮಾಡಿದ್ದೀನಿ. ಇರಿ ಯಾರಾದರೂ ಬರ್ತಾರೆ’ ಅಂದರು. ಅಷ್ಟರಲ್ಲಿ ಮಗನ ಕಾಲ್ ‘ಅಮ್ಮ ಇರು ಎಮರ್ಜೆನ್ಸಿಗೆ ಕಾಲ್ ಮಾಡಿದ್ದೀನಿ’ ಅಂತ. ಎಮರ್ಜೆನ್ಸಿಯವರು ಇರಿ ಬರ್ತೀವಿ ಅಂದರೆ ಅವರ ಲೆಕ್ಕ ಎಷ್ಟು ಹೊತ್ತಿರಬಹುದೋ ಎಂದು ಆತಂಕ ಆವರಿಸಿತು. ಆ ಹೆಂಗಸು ಆರಾಮವಾಗಿ ನಗುತ್ತಾ ‘ಹೊಸಬರಾ ಇಲ್ಲಿಗೆ? ’ ಅಂದರು. ‘ಹೂ ಶಿಫ್ಟ್ ಮಾಡಿ ೪ ದಿನವಾಯ್ತು’ ಅಂದೆ. ‘ನಾನು ಇಲ್ಲಿಗೆ ಬಂದು ೭ ವರ್ಷವಾಯ್ತು. ಆ ಕಡೆ ಲಿಫ್ಟ್ ಸರಿ ಇದೆ. ಈ ಲಿಫ್ಟ್ ಅದೆಷ್ಟು ಸಲ ಕೆಟ್ಟಿದೆಯೋ ಲೆಕ್ಕವೇ ಇಲ್ಲ’ ಅಂದರು. ಅಯ್ಯ! ನಮಗಾದರೆ ಅದು ಗೊತ್ತಿಲ್ಲ.

ಇವರು ಗೊತ್ತಿದ್ದೂ ಗೊತ್ತಿದ್ದೂ ಇದಕ್ಕೆ ಯಾಕೆ ಹತ್ತುತ್ತಾರೆ ಅಂದುಕೊಳ್ಳುವಾಗಲೇ ‘ಆದರೆ ಆ ಲಿಫ್ಟ್ ನಾನಿರೋ ಆರನೆಯ ಮಹಡಿಗೆ ಬರಲ್ಲ. ಇದೊಂದೇ ಅಲ್ಲಿಗೆ ಹೋಗೋದು’ ಅಂದರು. ‘ಅಲ್ಲ ಲಿಫ್ಟ್ ಸರಿ ಇಲ್ಲ ಅಂದರೂ ಇಲ್ಲೇ ಯಾಕಿದ್ದೀರಿ? ಬೇರೆ ಮನೆಗೆ ಹೋಗಬಾರದಾ? ’ ಅಂದೆ ಆಶ್ಚರ್ಯದಿಂದ. ‘ಇಲ್ಲ ಇಲ್ಲಿ ಬಾಡಿಗೆ ಕಡಿಮೆ. ನಾನು ಒಬ್ಬಳೇ ಇದ್ದೀನಿ ಆರನೆಯ ಮಹಡಿಯಲ್ಲಿರೋ ಸ್ಟೂಡಿಯೋ ಅಪಾರ್ಟ್‌ಮೆಂಟ್ ನಲ್ಲಿ. ಇಷ್ಟು ಕಡಿಮೆ ಬೆಲೆಗೆ ಡೌನ್ ಟೌನ್‌ನಲ್ಲಿ ಮನೆ ಸಿಗಲ್ಲ. ಹತ್ತಿರದಲ್ಲೆ ಅಂಗಡಿಗಳು ಇವೆ ಅನುಕೂಲವಾಗಿದೆ. ಲಿಫ್ಟ್ ಕೆಟ್ಟೋದಾಗ ಅಡ್ಜಸ್ಟ್ ಮಾಡ್ಕೊಳೋದು ಅಷ್ಟೇ’ ಅಂದರು ಆರಾಮವಾಗಿ. ಅಷ್ಟರಲ್ಲಿ ಮಗನ ಕಾಲ್ ‘ಎಮರ್ಜೆನ್ಸಿನವರು ಕಾಲ್ ಮಾಡಿದ್ರು. ಯೂನಿಫಾರ್ಮ್ ಹಾಕೊಳ್ತಿದಾರಂತೆ, ಇರು’ ಅಂದ.

‘ನಾನಿಲ್ಲಿ ಸಾಯ್ತಿದ್ರೆ ಅವನದ್ದೇನು ಫ್ಯಾಷನ್ ಪರೇಡ್. ಇರೋ ಡ್ರೆಸ್ಸಲ್ಲಿ ರಿಪೇರಿ ಮಾಡಬಾರದಾ’ ಅಂತ ಬಯ್ದೆ. ‘ಇಲ್ಲೆಲ್ಲ ರೂಲ್ಸ್ ಪ್ರಕಾರಾನೇ ಮಾಡ್ತಾರೆ. ಬರ್ತಾರೆ ಇರಮ್ಮ’ ಸಮಾಧಾನಿಸಿದ. ಅಷ್ಟರಲ್ಲಿ ಆ ಬದಿಯಿದ್ದ ರಸ್ತೆಯಲ್ಲಿ ಎರಡು ಫಯರ್ ಎಂಜಿನ್ ಮತ್ತು ಪೊಲೀಸ್ ವಾಹನಗಳು ಕಾಣಿಸಿ ಎದೆ ಧಸಕ್ಕೆಂದಿತು. ‘ಅಯ್ಯೋ ಇವರೆಲ್ಲ ಯಾಕೆ ಬಂದಿದ್ದಾರೆ. ಎಮರ್ಜೆನ್ಸಿನಾ’ ನನಗೆ ಕಣ್ಣು ಗುಡ್ಡೆ ಸಿಕ್ಕಿಕೊಂಡಂತಾಯಿತು. ಆ ಹೆಂಗಸು ನಗುತ್ತಾ ‘ಇಲ್ಲೇ ಪಕ್ಕದ ರೋಡಲ್ಲೇ ಫಯರ್ ಸ್ಟೇಷನ್. ಫ್ರೀ ಇದ್ರೆನೋ ಎರಡೆರಡು ಗಾಡಿಗಳು ಬಂದುಬಿಟ್ಟಿವೆ’ ಅಂದರು. ಈಯಮ್ಮನಿಗೆ ಯಾವತ್ತಾದರೂ ಯಾವುದಕ್ಕಾದರೂ ಭಯ ಅನ್ನೋದು ಆಗಿದೆಯೋ ಇಲ್ಲವೋ ಅಂತ ನಾನು ಬೆರಗಿನಲ್ಲಿ ನೋಡುವಾಗಲೇ ಲಿಫ್ಟ್ ಗಕ್‌ಗಕ್ ಅಂತ ಜೋರಾಗಿ ಅಲ್ಲಾಡಿತು.

‘ಅಯ್ಯೋ ಇದೇನೋ ಅಲ್ಲಾಡ್ತಿದೆ. ಬಿದ್ದೋಗಲ್ಲ ತಾನೇ’ ಅಂದೆ ಗೋಳು ದನಿಯಲ್ಲಿ. ನನ್ನ ಆತಂಕ ನೋಡಿ ಆ ಹೆಂಗಸು ‘ಬಿದ್ದೋದ್ರೆ ಇನ್ನು ಬಾಡಿಗೆನೇ ಕೇಳಲ್ಲ ಅವ್ರು’ ಅಂದರು ಜೋರಾಗಿ ನಗುತ್ತಾ. ನಾವೇ ನೆಗೆದು ಬಿದ್ದೋದರೆ ಅಂತ ನಾನು ಆತಂಕ ಪಟ್ಕೊಳ್ತಿದ್ರೆ ಈವಮ್ಮನಿಗೆ ಬಾಡಿಗೆ ಇಲ್ಲ ಅಂತ ಖುಷಿಯಂತೆ!

ನಾನು ಬಾಯಿ ಬಿಟ್ಟುಕೊಂಡು ನೋಡುತ್ತಿರುವಾಗಲೇ ಲಿಫ್ಟ್ ಬಾಗಿಲು ತೆರೆಯಿತು. ಎದ್ದೋ ಬಿದ್ದೋ ಅಂತ ಆಚೆ ಓಡಿದೆ. ಮಗ ಹೊರಗೆ ನಿಂತಿದ್ದ. ನಾನು ಶತ್ರುಪಾಳಯದಿಂದ ಪಾರಾಗಿ ಬಂದ ವೀರಯೋಧಳಂತೆ ಮಾತಾಡುತ್ತಿರುವಾಗಲೇ ಆ ಹೆಂಗಸು ನಗುತ್ತಾ ಆರಾಮವಾಗಿ ಹೊರಬಂದು ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತಲು ಶುರು ಮಾಡಿದರು. ಬದುಕನ್ನು ಇದ್ದಂತೆ ಒಪ್ಪಿಕೊಂಡ ಶಾಂತ ನಡಿಗೆಯನ್ನೇ ನೋಡುತ್ತಾ ನಿಂತೆ. . .

 

Tags: