Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಳೆಯ ಪುಸ್ತಕಗಳ ನಡುವೆ ನಗುವ ಆನಂದರಾಯರು

ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ ಮನೆ. . . ಹೀಗೆ ಸಿಕ್ಕ ಕಡೆಯಲ್ಲೆಲ್ಲಾ ಪುಸ್ತಕ ಕೊಂಡು ಓದುತ್ತಿದ್ದರು. ಆದರೆ ಬರುಬರುತ್ತಾ ತಂತ್ರಜ್ಞಾನ ಬೆಳೆಯಿತು, ಹೊಸ ಹವ್ಯಾಸಗಳು ಹೆಚ್ಚಾದವು. ಇದರ ಜೊತೆಜೊತೆಗೆ ಪುಸ್ತಕ ಓದುವ ಹವ್ಯಾಸವೂ ಕಡಿಮೆಯಾಗುತ್ತಾ ಹೋಯಿತು. ಆದರೆ ಗಮನಾರ್ಹ ಅಂಶವೆಂದರೆ, ಪುಸ್ತಕ ಓದುವವರ ಸಂಖ್ಯೆಯಲ್ಲಿ ಆಗಿರುವ ಬದಲಾ ವಣೆ ಅಷ್ಟೇನೂ ಇಲ್ಲ. ಆದರೆ ಪುಸ್ತಕ ಮಾರುವವರ ಪೈಕಿ ಮಾತ್ರ ಬಹಳ ಬದಲಾವಣೆಗಳಾಗಿವೆ. ಇಂತಹ ಬದಲಾವಣೆಯ ಸುನಾಮಿಯ ನಡುವೆಯೂ ಮೈಸೂರಿನ ಬಲ್ಲಾಳ್ ಸರ್ಕಲ್ (ಅಶೋಕ ವೃತ್ತ) ಬಳಿ ಆನಂದ ಬುಕ್ ಹೌಸ್ ಎಂಬ ಪುಟ್ಟ ಅಂಗಡಿಯೊಂದು ನಗುತ್ತಾ ನಿಂತಿದೆ. ಇದರ ಆಧಾರಸ್ತಂಭ ಆನಂದ ರಾವ್.

ಆಗಲೇ ಹೇಳಿದಂತೆ ಈಗಿನ ಕಾಲದಲ್ಲಿ ಪುಸ್ತಕ ಓದು ವವರಲ್ಲಿ ಆಗಿರುವ ಬದಲಾವಣೆಗಳಿಗಿಂತ ಪುಸ್ತಕ ಮಾರುವವರ ಪೈಕಿ ಆಗಿರುವ ಬದಲಾಣೆಗಳೇ ಹೆಚ್ಚು. ಪುಟ ತಿರುವುವ ಬದಲು ಕಿಂಡಲ್ ಮೇಲೆ ಕಣ್ಣಾಡಿಸ ಬಹುದು, ಪುಸ್ತಕ ತರಲು ಗ್ರಂಥಾಲಯಕ್ಕೋ, ಪುಸ್ತಕದಂಗಡಿಗೋ ಹೋಗುವ ಬದಲು ಕೂತಲ್ಲೇ ಆನ್ ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಯಾವುದೂ ಆಗದೆಂದರೆ ನೆಮ್ಮದಿಯಿಂದ ಕುಳಿತು ಆಡಿಯೋ ಬುಕ್ ಕೇಳಬಹುದು. ಇಷ್ಟೆಲ್ಲಾ ಬದಲಾವಣೆಗಳಾದರೂ ಪುಸ್ತಕದಂಗಡಿಗೆ ಹೋಗಿ, ಅವರು ಹೇಳುವ/ಶಿಫಾರಸ್ಸು ಮಾಡುವ ಪುಸ್ತಕಗಳನ್ನು ಕೈಗೆತ್ತಿಕೊಂಡು, ಒಂದೆರಡು ಸಾಲುಗಳನ್ನು ಓದಿ, ‘ಇದನ್ನು ಓದಲೇಬೇಕು’ ಎಂಬ ಭಾವನೆಯೊಂದಿಗೆ ಅದನ್ನು ಕೊಂಡು ಮನೆಗೆ ತೆರಳುವ ಭಾವನೆ ವರ್ಣಿಸಲಸಾಧ್ಯ. ಇಂತಹ ಅನುಭವವನ್ನು ಇನ್ನೂ ಜೀವಂತವಾಗಿರಿಸಿರುವ ಸ್ಥಳ ಆನಂದ್ ಬುಕ್ ಹೌಸ್. ಇನ್ನೂ ವಿಶೇಷವೆಂದರೆ ಇದು ಹಳೆಯ ಪುಸ್ತಕಗಳನ್ನು ಮಾರುವ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಅಂಗಡಿ.

ಅಂದಹಾಗೆ ಈ ಅಂಗಡಿಯ ವಯಸ್ಸೀಗ ಭರ್ತಿ ಅರವತ್ತೆರಡು ವರ್ಷಗಳು. ಡಿಸೆಂಬರ್ ೫, ೧೯೬೨ರಂದು ಆನಂದ್ ರಾವ್ ಅವರ ಅಣ್ಣ ಮಾಧವ ರಾವ್ ಅವರು ತಮ್ಮ ತಂದೆ ನೋಡಿಕೊಳ್ಳಲೆಂದು ಆರಂಭಿಸಿದ ಅಂಗಡಿ ಇದು. ಅಂದಿನಿಂದ ಇಂದಿನವರೆಗೂ ಇಲ್ಲಿ ಲಕ್ಷಾಂತರ ಜನರು ಬಂದು ತಮ್ಮ ಪುಸ್ತಕಗಳನ್ನು ಮಾರಿದ್ದಾರೆ, ಕೊಂಡಿದ್ದಾರೆ. ಈಗ ಈ ಅಂಗಡಿಯನ್ನು ನೋಡಿಕೊಳ್ಳುತ್ತಿರುವವರು ಎಪ್ಪತ್ತರ ಹರೆಯದಲ್ಲಿರುವ ಆನಂದ್ ರಾವ್. ‘ನೀವೂ ಪುಸ್ತಕ ಓದ್ತೀರ? ’ ಎಂಬ ಪ್ರಶ್ನೆಗೆ ನಗುತ್ತಲೇ, ‘ಹಾಗೇನೂ ಇಲ್ಲ. ಆದರೆ ಪುಸ್ತಕಗಳ ಬಗ್ಗೆ ತಿಳಿದುಕೊಂಡಿದ್ದೀನಿ? ಎಂದು ಉತ್ತರಿಸುವ ಆನಂದ್‌ರಾವ್ ಅವರ ಉತ್ಸಾಹಕ್ಕೂ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಂದ ಗ್ರಾಹಕರಿಗೆಲ್ಲಾ ಬಹಳ ಆಸ್ಥೆ ಯಿಂದ ತಮ್ಮ ಕೈಯಾರೆ ವಿವಿಧ ಕ್ಲಾಸಿಕ್ ಪುಸ್ತಕಗಳನ್ನು ತೆಗೆದುಕೊಡುವ ಅವರ ಚೈತನ್ಯ ಒಂದು ರೀತಿ ಸಾಂಕ್ರಾಮಿಕ. ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದ ರಾಯರು ಈಗ ಪೂರ್ಣಪ್ರಮಾಣದಲ್ಲಿ ಪುಸ್ತಕೋದ್ಯಮಿ. ಪುರಾತನ

ಪುಟಗಳ ಕಟ್ಟುಗಳ ನಡುವೆ ನಗುತ್ತಾ ಕೂರುವ ಇವರನ್ನು ನೋಡಿದರೆ ಮುತ್ತಿನಂತೆ ಪೋಣಿಸಿದ ಅಕ್ಷರದಂತೆಯೇ ಕಾಣುತ್ತಾರೆ. ಈ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು / ಬಳಸಿದ ಪುಸ್ತಕಗಳನ್ನು ಕೊಳ್ಳಲಾಗುತ್ತದೆ, ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಇಲ್ಲಿ ಸಿಗುವ ಪುಸ್ತಕಗಳು ಬೇರೆ ಕಡೆ ಸಿಗುವುದು ಬಹುತೇಕ ಅನುಮಾನ. ಹಾಸ್ಯ, ಕಾದಂಬರಿಗಳು, ಕ್ಲಾಸಿಕ್ಸ್, ಫಿಲಾಸಫಿ, ಆತ್ಮ ಕಥೆ. . . ನೀವು ಏನು ಕೇಳಿದರೂ ಅದಕ್ಕೊಂದು ಸೂಕ್ತ ಪುಸ್ತಕ ಇಲ್ಲಿ ಸಿಕ್ಕೇ ಸಿಗುತ್ತದೆ. ನಾವೇ ಪುಸ್ತಕಗಳನ್ನೆಲ್ಲಾ ತಾಳ್ಮೆಯಿಂದ ನೋಡಿ, ಒಂದೆರಡು ಸಾಲು ಓದಿ ಆನಂತರ ಕೊಳ್ಳಬಹುದು. ಎಷ್ಟು ಕೊಂಡರೂ ಬೆಲೆ ಮಾತ್ರ ಕೈಗೆಟುಕುವಂತೆಯೇ ಇರುತ್ತದೆ. ಇದರ ಮಧ್ಯೆ ಆನಂದ್ ರಾವ್ ಅವರ ಅನುಭವದ ಹಾಗೂ ಆತ್ಮೀಯತೆಯ ಮಾತು ಕೇಳಿದಷ್ಟೂ ಖುಷಿಯೇ. ಬಾಲ್ಯದಿಂದ ಮೈಸೂರಿನಲ್ಲೇ ಇರುವ ಆನಂದ ರಾಯರು ಮಾತನಾಡುತ್ತಿದ್ದರೆ ಒಮ್ಮೆ ಹಳೆ ಮೈಸೂರನ್ನು ಸುತ್ತಿ ಬಂದಂತಾಗುತ್ತದೆ. ಜೊತೆಗೆ ಎಂದೂ ಕಾಣದ ಪುಸ್ತಕದ ಲೋಕವೊಂದರಲ್ಲಿ ಪಯಣಿಸಿದ ಅನುಭವವೂ ಆಗುತ್ತದೆ. ಈಗೆಲ್ಲಾ ಪುಸ್ತಕೋದ್ಯಮ ಬೇರೆಯದ್ದೇ ಆಯಾಮ ಪಡೆದುಕೊಳ್ಳುತ್ತಿದೆ. ಖಾಸಗಿ ಪುಸ್ತಕ ಮಳಿಗೆಗಳು ಬಹುತೇಕ ನೇಪಥ್ಯಕ್ಕೆ ಸರಿಯುತ್ತಿವೆ. ರೀಟೇಲ್ ಪುಸ್ತಕದಂಗಡಿಗಳು ಕಾಣೆಯಾಗುತ್ತಿವೆ. ನಷ್ಟದಿಂದಲೋ ಅಥವಾ ನಡೆಸುವವರ ಅಭಾವದಿಂದಲೋ ಖಾಸಗಿ ವಲಯದಲ್ಲಿನ ಪುಸ್ತಕೋದ್ಯಮ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ.

ಇಂತಹ ಕಾಲಮಾನದಲ್ಲಿ ಆನಂದ್‌ರಾವ್ ಅವರ ಪುಸ್ತಕ ಪ್ರೀತಿ ಎಂತಹವರೂ ಮೆಚ್ಚುವಂತಹದ್ದು. ಆಗಿನ ಕಾಲದಲ್ಲಿ, ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿ ಎನ್ನುವ ಪರಿಕಲ್ಪನೆಯೇ ಇಲ್ಲದ ಕಾಲದಲ್ಲಿ ಆನಂದ್ ರಾವ್ ಅವರ ಅಣ್ಣ ಸೇತುರಾವ್ ೧೯೫೨-೫೩ರಲ್ಲಿ ತಾವು ಓದಿದ ಪುಸ್ತಕಗಳನ್ನು ಮರದ ಕೆಳಗಡೆ ಇಟ್ಟು ಮಾರುತ್ತಿದ್ದ ರಂತೆ. ಆನಂತರ ಮೈಸೂರಿನಲ್ಲೇ ಮೊದಲ ಬಾರಿಗೆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿ ಆರಂಭವಾಯಿತು. ಇವರೇ ಒಂದು ಕಾಲದಲ್ಲಿ ಗ್ರಂಥಾಲಯವನ್ನೂ ನಡೆಸುತ್ತಿದ್ದರು. ತಿಂಗಳಿಗೆ ಒಂದು ರೂಪಾಯಿ ನೀಡಿ ಎಷ್ಟು ಬೇಕಾದರೂ ಪುಸ್ತಕಗಳನ್ನು ಓದಬಹುದಿತ್ತು. ‘ಈಗಿನ ಕಾಲದ ಮಕ್ಕಳು ಮೊಬೈಲ್, ಟಿವಿಗೆ ಗುಲಾಮರಾಗಿದ್ದಾರೆ. ಆದರೆ ನಾವೆಲ್ಲರೂ ಪುಸ್ತಕೋ ದ್ಯಮದಲ್ಲೇ ತೊಡಗಿಕೊಂಡಿದ್ದವರು.

ತಂತ್ರಜ್ಞಾನ ಇಲ್ಲದ ಕಾರಣ ನಮ್ಮ ಕಾಲದಲ್ಲಿ ನಕಾರಾತ್ಮಕತೆ ಬಹಳ ಕಡಿಮೆ ಇತ್ತು. ನಮಗೆ ಜೀವನ ಕೊಟ್ಟ ಈ ಉದ್ಯಮ ನಮಗೆ ತಾಯಿಗೆ ಸಮಾನ. ಇದನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ಅಂಗಡಿಗೆ ಅದೆಷ್ಟೋ ಮಂದಿ ಬೇರೆ ಬೇರೆ ಪುಸ್ತಕಗಳನ್ನು ಹುಡುಕಿಕೊಂಡು ಬರುತ್ತಾರೆ. ಬೇರೆ ಊರುಗಳಿಂದೆಲ್ಲಾ ಫೋನು ಮಾಡುತ್ತಾರೆ. ಇನ್ನೂ ಈ ಉದ್ಯಮದಲ್ಲೇ ತೊಡಗಿಕೊಂಡಿರುವುದಕ್ಕೆ ನನಗಂತೂ ಬಹಳವೇ ಖುಷಿಯಿದೆ’ ಎನ್ನುತ್ತಾ ತಮ್ಮ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಪುಸ್ತಕದಂಗಡಿಯ ಆತ್ಮಕಥೆಯನ್ನು ನಿರೂಪಿಸಿ ಮುಗಿಸುತ್ತಾರೆ ಆನಂದರಾಯರು.

sirimysuru18@gmail.com

 

Tags: