ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ
ಹಾಗೂ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರ ಬರೆದಿರುವ ರಾಜ್ಯ ಮಹಿಳಾ ಅಧ್ಯಕ್ಷೆ ಅವರು, ಡಾ. ಬಿ.ಆರ್.ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಸಂಬಂಧ ವಿಧಾನ ಪರಿಷತ್ ಸದನ ಕಲಾಪದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ಗದ್ದಲ ಶುರುವಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯದ ಒಬ್ಬ ಜವಾಬ್ದಾರಿಯುತ ಮಾಜಿ ಮಂತ್ರಿಗಳಾಗಿರುವ ಸಿ.ಟಿ.ರವಿ ಹೆಣ್ಣು ಮಕ್ಕಳ ಕುರಿತು ಈ ರೀತಿಯ ಕೀಳುಮಟ್ಟದ ಅಸಂವಿಧಾನಿಕ ಪದ ಬಳಸಿರುವುದು ನಾಡಿನ ಹೆಣ್ಣು ಕುಲಕ್ಕೆ, ಅವರ ಘನತೆಗೆ ಮಾಡಿರುವ ಅಪಮಾನ. ಹೀಗಾಗಿ ತಾವುಗಳು ಈ ವಿಷಯವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.