ಬೆಂಗಳೂರು: ಯಾರದ್ದೋ ಸೂಚನೆ ಮೇರೆಗೆ ಪೊಲೀಸರು ನನ್ನ ಹತ್ಯೆ ಮಾಡಲು ಕಲ್ಲಿನ ಕ್ವಾರಿ, ಗಲ್ಲಿ ರಸ್ತೆ ಹಾಗೂ ಗದ್ದೆಯನ್ನೆಲ್ಲಾ ಸುತ್ತಾಡಿಸಿದ್ದಾರೆ ಎಂದು ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು(ಡಿಸೆಂಬರ್.21) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧ ಅವರಣದ ಒಳಗಡೆಯೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ ಅಷ್ಟೊಂದು ಭದ್ರತೆ ಇರುವ ಸ್ಥಳದಲ್ಲಿಯೇ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿತ್ತು. ಹೀಗಾಗಿ ಗುಂಪಿನಿಂದ ನನ್ನನ್ನು ಹತ್ಯೆ ಮಾಡಿಸಲೆಂದೇ ಪೊಲೀಸರ ಮುಖಾಂತರ ಗಲ್ಲಿ ಹಾಗೂ ಗದ್ದೆಯಲ್ಲಿ ಸುತ್ತಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಎಂಎಲ್‌ಸಿ ಸಿ.ಟಿ.ರವಿ ಹೇಳಿದ್ದೇನು?
ಸುವರ್ಣಸೌಧದಲ್ಲಿರುವ ವಿಧಾನ ಪರಿಷತ್‌ನಲ್ಲಿ ಅಂಬೇಡ್ಕರ್ ವಿಚಾರದ ಬಗ್ಗೆ ನಡೆಯುತ್ತಿದ್ದ ಚರ್ಚೆ ಜೋರಾದ ಕಾರಣ ಕಲಾಪ ಮುಂದೂಡಿಕೆ ಆಗಿತ್ತು. ಬಳಿಕ ನಾನು ಪಶ್ಚಿಮ ದ್ವಾರಕ್ಕೆ ಬಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಈ ಹಿಂದೆಯಲ್ಲಾ ಕಾಂಗ್ರೆಸ್ ಯಾವ ರೀತಿ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಲು ಮುಂದಾಗಿದ್ದೆ. ಇದೇ ವೇಳೆ ಮಾಧ್ಯಮಗಳು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದೀರಾ? ನಿಮ್ಮ ಮೇಲೆ ಇಂತಹ ಆರೋಪ ಬಂದಿದೆ ಎಂದು ಪ್ರಶ್ನಿಸಿದರು.
ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್ ಅವರನ್ನು ನಾನು ಎದುರಿಗೆ ಸಿಕ್ಕಾಗ ಲಕ್ಷ್ಮಕ್ಕ ಎಂದು ಮಾತನಾಡಿಸುತ್ತೇನೆ. ಅವರು ಏನು ಹೇಳಿದರೂ, ನಾನು ಏನು ಹೇಳಿದೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಅದೆಲ್ಲಾ ಅಂತರಾತ್ಮ ಮತ್ತು ಪರಮಾತ್ಮನಿಗೆ ಬಿಟ್ಟದ್ದು. ಆದರೆ ನಾನು ಮಧ್ಯಾಹ್ನದ ಊಟ ಮುಗಿಸಿ ಬರುವಾಗ ಪಶ್ಚಿಮ ದ್ವಾರದಲ್ಲಿ ನನ್ನ ಮೇಲೆ ದಾಳಿ ನಡೆಯಿತು. ಆ ವೇಳೆ ಮಾರ್ಷಲ್‌ಗಳು ಪೊಲೀಸರನ್ನು ದೂರ ತಳ್ಳಿ ನಮ್ಮನ್ನು ಒಳಗಡೆ ಕರೆದುಕೊಂಡು ಹೋದರು. ಅಲ್ಲದೇ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ವಾಪಾಸ್ ಬರುವಾಗ 3-4 ಜನ ನನ್ನ ಮೇಲೆ ಹಲ್ಲೆ ಮಾಡಲು ಬಂದರು. ನಿನ್ನನ್ನು ಕೊಲೆ ಮಾಡುತ್ತೇವೆ, ನಿನ್ನ ಹೆಣವನ್ನು ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿದ್ದಾರೆ. ಆಗ ಅವರನ್ನು ಮಾರ್ಷಲ್‌ಗಳು ಗೇಟಿನ ಆಚೆಗೆ ಹಾಕಿದರು. ಆದರೆ ನಾನು ಅಲ್ಲೇ ಧರಣಿ ನಡೆಸಿದೆ. ನಂತರ ಸಭಾಪತಿ ಭೇಟಿಗೆ ಬುಲಾವ್ ಬಂತು ಅಲ್ಲಿಗೆ ಹೋದೆ ಎಂದು ಹೇಳಿದ್ದಾರೆ.
ಇನ್ನು ಸಭಾಪತೊಗೂ ಪಶ್ಚಿಮ ದ್ವಾರದ ಹಲ್ಲೆ, ಮೊಗಸಾಲೆಯಲ್ಲಿ ನಡೆದ ಹಲ್ಲೆಯ ಬಗ್ಗೆ ದೂರು ನೀಡಲಾಯಿತು. ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ಕೊಟ್ಟಿರೋದಾಗಿ ಸಭಾಪತಿ ತಿಳಿಸಿದರು. ಆದರೆ ನಾನು ಏನೆಲ್ಲಾ ಆಯಿತು ಎಂಬುದರ ಬಗ್ಗೆ ಲಿಖಿತ ಸಮಜಾಯಿಷಿ ನೀಡಿದೆ ಎಂದಿದ್ದಾರೆ.