ಬೆಂಗಳೂರು: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯ ವೇದಿಕೆಯಾಗಿ ಮಾರ್ಪಾಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ನಾಡಿನ ನುಡಿ ಪರಂಪರೆ, ಶ್ರೀಮಂತ ಸಾಹಿತ್ಯ, ಇತಿಹಾಸ, ಸಂಸ್ಕೃತಿಯನ್ನ ಸಂಭ್ರಮಿಸುವ ವೇದಿಕೆಯಾಗಬೇಕಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ರಾಜಕೀಯ ವೇದಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ಕಾರ ತಾಯಿ ಕನ್ನಡಾಂಬೆಗೆ, ಹಾಗೂ ಕನ್ನಡಿಗರ ತಾಯ್ನಾಡಿಗೆ ಘೋರ ಅಪಮಾನ ಎಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರದ(ಡಿಸೆಂಬರ್.20) ಮುಖ್ಯಮಂತ್ರಿಗಳ ಭಾಷಣದುದ್ದಕ್ಕೂ ರಾಜಕೀಯ ಕೆಸರೆರಚಾಟ, ಪುಸ್ತಕ ಮಳಿಗೆಗಳಲ್ಲಿ ರಾಜಕೀಯ ಪ್ರೇರಿತ ಪುಸ್ತಕಗಳ ಪ್ರದರ್ಶನ, ಮಾರಾಟ – ಇದೇನಾ ಸಾಹಿತ್ಯ ಸಮ್ಮೇಳನದ ಉದ್ದೇಶ? ಎಂದು ಪ್ರಶ್ನಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಇಟ್ಟಿರುವ ಎಲ್ಲ ರಾಜಕೀಯ ಪ್ರೇರಿತ ಪುಸ್ತಕಗಳನ್ನು ತೆರವು ಮಾಡಬೇಕು, ರಾಜಕೀಯ ಭಾಷಣಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.