ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಇದು ನನ್ನ ಮೇಲೆ ನಡೆದ ಹಲ್ಲೆಯಲ್ಲ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲೆ ನಡೆದ ಹಲ್ಲೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂಸತ್ ಭವನದ ಮಕರ ದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ. ನಿಯಂತ್ರಣ ತಪ್ಪಿ ನಾನು ಕೆಳಗೆ ಬಿದ್ದೆ. ಪರಿಣಾಮ ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಂಭೀರ ಗಾಯ ಆಗಿದೆ ಎಂದು ಕಿಡಿಕಾರಿದ್ದಾರೆ.
ಈ ವೇಳೆ ನನ್ನನ್ನು ಕಾಂಗ್ರೆಸ್ ಸಂಸದರು ಸ್ಥಳಕ್ಕೆ ಕುರ್ಚಿ ತಂದು ಕೂರಿಸಿದರು. ನನ್ನ ಸಹೋದ್ಯೋಗಿಗಳ ನೆರವಿನಿಂದ ಕುಂಟುತ್ತಲೇ ಸದನಕ್ಕೆ ಬಂದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಪೀಕರ್‌ಗೆ ಬರೆದಿರುವ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಸಂಸತ್ ಭವನದ ನಡುವೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸಂಸದರ ನಡುವೆ ಮುಖಾಮುಖಿ ನಡೆದ ಪರಿಣಾಮ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಳ್ಳಿದ್ದರಿಂದಲೇ ಗಾಯ ಆಗಿದೆ ಎಂದು ಬಿಜೆಪಿ ಸಂಸದರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ರಾಗಾ ತಳ್ಳಿ ಹಾಕಿದ್ದಾರೆ.





