ಚೆನ್ನೈ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತು ತಮಿಳು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಲವು ವ್ಯಕ್ತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರೆಂದರೆ ಅಲರ್ಜಿ ಇರಬಹುದು ಎಂದು ಕಿಡಿಕಾರಿದ್ದಾರೆ.
ಎಲ್ಲಾ ಭಾರತೀಯರು ನಾಗರಿಕರಿಗೆ ಸ್ವಾಂತಂತ್ರ್ಯದ ಮನೋಭಾವವನ್ನು ಪ್ರತಿನಿಧಿಸುವ ಅಪ್ರತಿಮ ರಾಜಕೀಯ ಮತ್ತು ಬೌದ್ಧಿಕ ವ್ಯಕ್ತಿತ್ವ ಅಂಬೇಡ್ಕರ್ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು, ಪರಂಪರೆಯು ಅಂಚಿನಲ್ಲಿರುವ ಸಮುದಾಯಗಳಿಗೆ ಭರವಸೆಯ ಬೆಳಕು ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಪ್ರತಿರೋಧದ ಸಂಕೇತ ಎಂದು ಒತ್ತಿ ಹೇಳಿದ್ದಾರೆ.
ನಾನು ಅಂಬೇಡ್ಕರ್ ಅವರ ಹೆಸರನ್ನು ನಿರಂತರವಾಗಿ ಜಪಿಸುವುದಾಗಿ ವಿಜಯ್ ಹೇಳಿದ್ದು, ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್.. ಅವರ ಹೆಸರನ್ನು ನಮ್ಮ ಹೃದಯದಲ್ಲಿ ಮತ್ತು ನಮ್ಮ ತುಟಿಗಳಲ್ಲಿ ಸಂತೋಷದಿಂದ ಜಪಿಸೋಣ ಎಂದು ನಟ ವಿಜಯ್ ಪ್ರತಿಪಾದಿಸಿದ್ದಾರೆ.
ಈ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಚಿವ ಸ್ಥಾನಕ್ಕೆ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.





