ಮಾಸ್ಕೋ: ರಷ್ಯಾ ದೇಶವು ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ್ದು, ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಉಚಿತವಾಗಿ ನೀಡುವ ಗುರಿ ಹೊಂದಿದೆ.
ಈ ಮೂಲಕ ರಷ್ಯಾ ದೇಶವು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಈ ಬಗ್ಗೆ ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಣೆ ಮಾಡಿದ್ದು, ತನ್ನ ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂದು ಹೇಳಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ, ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಅವರು, ಕ್ಯಾನ್ಸರ್ ಲಸಿಕೆ ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಕ್ಯಾನ್ಸರ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದು, ರಷ್ಯಾದ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿದ್ದಾರೆ.
ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಣೆ ನೀಡಿದ್ದಾರೆ.
ಇನ್ನು ಈ ವರ್ಷಾರಂಭದಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಲಸಿಕೆ ತಯಾರಿಸಲು ರಷ್ಯಾ ಬಹಳ ಸಮೀಪದಲ್ಲಿದೆ ಎಂದು ಮಾಹಿತಿ ನೀಡಿದ್ದರು. ಈಗ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ್ದು, ರಷ್ಯಾ ದೇಶದ ಜನತೆಯ ಮೊಗದಲ್ಲಿ ಭಾರೀ ಮಂದಹಾಸ ಮನೆಮಾಡಿದೆ.





