Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್‌ ಜಾರಕಿಹೊಳಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌

ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ವಕೀಲ ಕೆ.ದಿಲೀಪ್‌ ಕುಮಾರ್‌ ಎಂಬುವವರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್‌ ಅರ್ಜಿಯನ್ನು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಪ್ರಕರಣದ ಹಿನ್ನೆಲೆ:
ಕಳೆದ 2022ರ ನವೆಂಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಏರ್ಪಡಿಸಿದ್ದ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಹಿಂದೂ ಎಂಬ ಪದ ಎಲ್ಲಿಂದ ಬಂತು? ಈ ಪದ ನಮ್ಮದಲ್ಲ ಪರ್ಷಿಯನ್‌ ಭಾಷೆಯಿಂದ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮುಂದುವರಿದು ಮಾತನಾಡಿದ್ದ ಅವರು, ಹಿಂದೂ ಎಂಬುದು ಭಾರತೀಯ ಪದವೇ ಅಲ್ಲ. ಅದು ನಮ್ಮದು ಹೇಗಾಯಿತು? ಅದರ ಬಗ್ಗೆ ಚರ್ಚೆಯಾಗಬೇಕಿದೆ. ಅದಕ್ಕೂ ಮೀರಿ ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರುವ ಧರ್ಮವನ್ನು ನಮ್ಮದು ಎನ್ನುವುದು ಹೇಗೆ? ಎಂದು ಕಾರ್ಯಕ್ರಮದಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದರು.

ಈ ಹೇಳಿಕೆ ಬೆನ್ನಲ್ಲೇ ರಾಜ್ಯಾದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಡಿ.ಕೆ.ಶಿವಕುಮಾರ್‌ ಅವರೇ ಸತೀಶ್‌ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ್ದರು. ಅಲ್ಲದೇ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದ್ದರು.

ಹಿಂದೂ ಧರ್ಮದ ಬಗ್ಗೆ ನಿಂದನೆ ಬಗ್ಗೆ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಶಾಂತಿ ಮೂಡಿಸಲಾಗುತ್ತಿದೆ. ಸಮುದಾಯಗಳ ನಡುವೆ ದ್ವೇಷಕ್ಕೆ ಈ ಭಾಷಣ ಕಾರಣವಾಗಿದೆ. ಎಂದು ವಕೀಲ ಕೆ. ದಿಲೀಪ್‌ ಕುಮಾರ್‌ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್‌.ಶಿವಕುಮಾರ್‌ ಅವರಿದ್ದ ಪೀಠವು ಸತೀಶ್‌ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತ್ತು.

ಬಳಿಕ ಸತೀಶ್‌ ಜಾರಕಿಹೊಳಿ ಈ ದೂರನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಇದೀಗ ಜಾರಕಿಹೊಳಿಯವರ ಅರ್ಜಿ ಪುರಸ್ಕರಿಸಿ ಕೇಸ್‌ ರದ್ದುಮಾಡಿದೆ. ಈ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸತೀಶ್‌ ಜಾರಕಿಹೊಳಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

 

Tags: