ಕೊಳ್ಳೇಗಾಲ: ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಸ್.ಜಯಣ್ಣ ಅವರು ಇಂದು(ಡಿ.10) ತೀವ್ರ ಎದೆನೋವಿನಿಂದ ಬಳಲುತ್ತಿದ್ದರು, ಈ ಕಾರಣಕ್ಕೆ ಅವರನ್ನು ಸಮೀಪದ ಜನನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿಯೇ ಕೊನೆ ಉಸಿರೆಳಿದ್ದಾರೆ. ಅವರು ರಸ್ತೆ ಮಾರ್ಗವಾಗಿ ಆಸ್ಪತ್ರೆಗೆ ಬರುವ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮೃತ ಎಸ್.ಜಯಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಕೊಳ್ಳೇಗಾಲ ವಿಧಾನಸಭಾಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಅವರು ಈ ಭಾಗದ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಜಯಣ್ಣ ಅವರ ಮನೆಯ ಗೃಹ ಪ್ರವೇಶಕ್ಕೆ ಭೇಟಿ ನೀಡಿದ್ದರು.
ಎಸ್.ಜಯಣ್ಣನವರು ಇಂದು ಮಧ್ಯಾಹ್ನ ಸಾವನ್ನಪ್ಪಿರುವ ಕಾರಣ ನಾಳೆ(ಡಿ.11) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.