- ಪ್ರೊ. ಆರ್. ಎಂ. ಚಿಂತಾಮಣಿ
ಕಳೆದ ಎರಡು ಶುಕ್ರವಾರಗಳಂದು ಎರಡು ಪ್ರಕಟಣೆಗಳು ಬಂದವು. ಮೊದಲನೆಯದು ಕೇಂದ್ರ ಅಂಕಿಸಂಖ್ಯೆ ಕಚೇರಿಯಿಂದ ೨೦೨೪-೨೫ರ ೨ನೇ ತ್ರೈಮಾಸಿಕದಲ್ಲಿಯ ರಾಷ್ಟ್ರೀಯ ಒಟ್ಟಾದಾಯ (ಜಿಡಿಪಿ) ಬೆಳವಣಿಗೆ ಮತ್ತು ಅಕ್ಟೋಬರ್ ತಿಂಗಳ ಹಣದುಬ್ಬರದ ದರ. ಎರಡನೆಯದು ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಡಿಸೆಂಬರ್ ತಿಂಗಳವರೆಗಿನ ಹಣಕಾಸು ನೀತಿಯ ವಿಮರ್ಶೆ ಮತ್ತು ಮುಂದಿನ ಎರಡು ತಿಂಗಳುಗಳಿಗಾಗಿ ಹಣಕಾಸು ನೀತಿಯ ರೂಪರೇಷೆ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ರಮಗಳು.
ಈ ವಿಷಯದಲ್ಲಿ ಚಿಂತಿಸುವ ಅವಶ್ಯಕತೆ ಇದೆ. ಬೆಲೆ ಏರಿಕೆಯ ತಾಂಡವಕ್ಕೆ ಜಿಡಿಪಿ ತತ್ತರಿಸಿ ಹೋಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. ೬. ೭ ಬೆಳವಣಿಗೆ ಕಂಡಿದ್ದ ಜಿಡಿಪಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. ೧. ೩ ಕುಸಿತ ಕಂಡು ಶೇ. ೫. ೪ಕ್ಕೆ ಮಾತ್ರ ಬೆಳವಣಿಗೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ (೨೦೨೩-೨೪) ೨ನೇ ತ್ರೈಮಾಸಿಕದಲ್ಲಿ ಶೇ. ೮. ೧ರಷ್ಟು ಬೆಳವಣಿಗೆ ಕಂಡಿತ್ತು. ಚಾಲಕ ಉದ್ದಿಮೆ ವಲಯವೆಂದೇ ಕರೆಯಲಾಗುವ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಎಣ್ಣೆ ಶುದ್ಧೀಕರಣ ಘಟಕಗಳು, ಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಹೀಗೆ ಎಂಟು ಮೂಲ ಉದ್ದಿಮೆಗಳಲ್ಲಿಯ ಉತ್ಪಾದನೆಯೂ ಅಕ್ಟೋಬರ್‌ನಲ್ಲಿ ಶೇ. ೩. ೧ ಮಾತ್ರ ಬೆಳವಣಿಗೆ ಕಂಡಿತ್ತು.
ಇದು ಕಳೆದ ವರ್ಷ ಇದೇ ತಿಂಗಳಲ್ಲಿ ಶೇ. ೧೨. ೭ ಇತ್ತು ಮಳೆಗಾಲ ಚೆನ್ನಾಗಿ ಇದ್ದುದ್ದರಿಂದ ಕೃಷಿಯಲ್ಲಿ ಮಾತ್ರ ಕಳೆದ ವರ್ಷಕ್ಕಿಂತ ಹೆಚ್ಚು ಉತ್ಪಾದನೆಯಾಗಿದೆ (ಮುಂಗಾರಿನಲ್ಲಿ) ಹಿಂಗಾರು ಬಿತ್ತನೆಯೂ ಉತ್ತಮವಾಗಿಯೇ ಇರುತ್ತದೆ. ಕಳೆದ ಏಳು ತ್ರೈಮಾಸಿಕಗಳಲ್ಲಿಯೇ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆಯಾಗಿರುವುದು ಈ ತ್ರೈಮಾಸಿಕದಲ್ಲಿಯೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ಶೇ. ೬. ೨ಕ್ಕೆ ಏರಿದ್ದು ಡಿಸೆಂಬರ್ ತಿಂಗಳು ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆ ರೆಪೊ ಬಡ್ಡಿ ದರವನ್ನು ಮತ್ತು ರಿಸರ್ವ್ ರೆಪೊ ದರ, ಬ್ಯಾಂಕ್ ದರ ಇಳಿಸಬಹುದೆಂಬ ನಿರೀಕ್ಷೆ ಹುಸಿಯಾಯಿತು.
ಹಿಂದಿನ ೨೦ ತಿಂಗಳುಗಳಿಂದಲೂ ರೆಪೊ ದರ (ರಿಸರ್ವ್ ಬ್ಯಾಂಕು ಬ್ಯಾಂಕುಗಳಿಗೆ ತಾತ್ಕಾಲಿಕ ಸಾಲ ಕೊಡುವ ಬಡ್ಡಿ ದರ) ಮಧ್ಯಮ ಮಿತಿ ಶೇ. ೪. ೦ಕ್ಕಿಂತ ಮೇಲೆಯೇ ಇರುವುದು ಈ ನೀತಿ ದರ ಇಳಿಸದೇ ಇರಲು ಕಾರಣ. ಕೆಲವು ತಿಂಗಳುಗಳಲ್ಲಿ ಹಣದುಬ್ಬರ ಗರಿಷ್ಟ ಮಿತಿ ಶೇ. ೬. ೦ಕ್ಕಿಂತ ಮೇಲೆಯೇ ಇದ್ದದ್ದು ಸೆಪ್ಟೆಂಬರ್ ತಿಂಗಳಲ್ಲಿ ಶೇ. ೫. ೦ಯ ಆಸುಪಾಸು ಇತ್ತು. ಈಗ ಮತ್ತೆ ಏರಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದಾರ್ಥಗಳ ಬೆಲೆಗಳು ವಿಶೇಷವಾಗಿ ಹಣ್ಣು, ತರಕಾರಿಗಳ ಬೆಲೆಗಳು ವಿಪರೀತ ಏರಿದ್ದು. ಈ ಬೆಲೆ ಏರಿಕೆಯ ಕಾರಣದಿಂದ ಹಳ್ಳಿ ಪಟ್ಟಣಗಳಲ್ಲಿ ಮಧ್ಯಮ ವರ್ಗ ಮತ್ತು ಕೆಳ ವರ್ಗಗಳ ಜನರು ತಮ್ಮ ನಿತ್ಯದ ಅವಶ್ಯಕತೆಗಳಿಗಾಗಿ ಖರ್ಚು ಮಾಡುವುದೇ ಕಷ್ಟವಾಗಿರುವಾಗ ಇತರೆ ವಸ್ತು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಇದರಿಂದ ಒಟ್ಟಾರೆ ಬೇಡಿಕೆ ಕಡಿಮೆಯಾಗಿದೆ. ಉತ್ಪಾದಕ ಉದ್ಯಮಗಳೂ ಸೇರಿದಂತೆ ಎಲ್ಲ ಉದ್ಯಮ ವಲಯಗಳಲ್ಲೂ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಹೀಗಾಗಿ ಒಟ್ಟಾರೆ ಅರ್ಥ ವ್ಯವಸ್ಥೆಯಲ್ಲಿ ಬೆಳವಣಿಗೆ ಇಳಿಮುಖವಾಗಿದೆ. ಜಿಡಿಪಿ ಬೆಳವಣಿಗೆ ಕುಸಿದಿದೆ. ರಿಸರ್ವ್ ಬ್ಯಾಂಕ್ ಹೊಣೆಗಾರಿಕೆ: ದೇಶದ ಕೇಂದ್ರೀಯ ಬ್ಯಾಂಕಿನ (ರಿಸರ್ವ್ ಬ್ಯಾಂಕಿನ) ಮೊದಲ ಕರ್ತವ್ಯ ಹಣದುಬ್ಬರವನ್ನು ನಿಯಂತ್ರಿಸಿ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಪಾಡುವುದು ಮತ್ತು ಅಂತಾರಾಷ್ಟ್ರೀಯ ಪೇಟೆಯಲ್ಲಿ ರೂಪಾಯಿಯ ಮೌಲ್ಯವನ್ನು ರಕ್ಷಿಸುವುದು. ನಂತರದ ಆದ್ಯತೆ ಆರ್ಥಿಕ ಬೆಳವಣಿಗೆಗೆ ಪೂರಕವಾದ ಹಣಕಾಸು ವಾತಾವರಣ ನಿರ್ಮಿಸುವುದು. ಇದಕ್ಕಾಗಿ ತನ್ನ ಮೊದಲ ಆದ್ಯತೆಯೊಡನೆ ಅರ್ಥ ವ್ಯವಸ್ಥೆಗೆ ನಗದು ಹರಿವನ್ನು ನಿಯಂತ್ರಿಸಲು (ಗಾತ್ರ ಮತ್ತು ಮೌಲ್ಯ) ರಿಸರ್ವ್ ಬ್ಯಾಂಕ್ ಪತ್ತು ನಿಯಂತ್ರಣ ಮತ್ತು ಬಡ್ಡಿ ದರಗಳ ನಿಯಂತ್ರಣ ಮುಂತಾದ ಸಾಧನೆಗಳನ್ನು ಬಳಸುತ್ತದೆ.
ಅದು ತನ್ನ ಈ ಕಾಯ್ದೆಬದ್ಧ ಕರ್ತವ್ಯಗಳನ್ನು ಮೀರಿ ಹೋಗುವಂತಿಲ್ಲ. ನಿರಂತರವಾಗಿ ಅರ್ಥವ್ಯವಸ್ಥೆಯಲ್ಲಿ ನಗದು ಹರಿವಿನ ಗಾತ್ರ ಮತ್ತು ಮೌಲ್ಯಗಳನ್ನಲ್ಲದೆ ಬೆಲೆಗಳ ಚಲನವಲನಗಳನ್ನು ಗಮನಿಸುತ್ತಿರುತ್ತದೆ. ಕಳೆದ ವಾರದ ಹಣಕಾಸು ನೀತಿ ಸಮಿತಿಯ ನಿರ್ಣಯಗಳಂತೆ ರಿಸರ್ವ್ ಬ್ಯಾಂಕು ನೀತಿ ಬಡ್ಡಿ ದರಗಳನ್ನು ಯಥಾಸ್ಥಿತಿ ಮುಂದುವರಿಸಿದ್ದು, ತಟಸ್ಥ ನಿಲುವು ಮುಂದುವರಿದಿದೆ. ಬ್ಯಾಂಕುಗಳು ತಮ್ಮ ಠೇವಣಿಗಳ ಹೊಣೆಗಾರಿಕೆಯ ಬಾಬ್ತು ರಿಸರ್ವ್ ಬ್ಯಾಂಕಿನ ಇಡಲೇಬೇಕಾದ (ಕಡ್ಡಾಯವಾಗಿ) ಪ್ರಮಾಣವನ್ನು ಸಿಆರ್ ಆರ್) ಶೇ. ೪. ೫ರಿಂದ ಎರಡು ಕಂತುಗಳಲ್ಲಿ ಶೇ. ೦. ೫ ಕಡಿಮೆ ಮಾಡಿ (ಡಿಸೆಂಬರ್ ೧೪ರಂದು ಶೇ. ೦. ೨೫ ಮತ್ತು ಡಿಸೆಂಬರ್ ೨೮ರಂದು ಶೇ. ೦. ೨೫) ಶೇ. ೪. ೦೦ಕ್ಕೆ ಇಳಿಸಲಾಗುವುದು. ಅಂದರೆ ಅಷ್ಟರಮಟ್ಟಿಗೆ ಬ್ಯಾಂಕುಗಳಿಗೆ ಸಾಲ ಕೊಡಲು ಹೆಚ್ಚು ಠೇವಣಿಗಳ ಮೊತ್ತ ಉಳಿಯುತ್ತದೆ. ಅರ್ಥ ವ್ಯವಸ್ಥೆಗೆ ಅಷ್ಟು ನಗದು ಹರಿವು ಹೆಚ್ಚಾಗುತ್ತದೆ.
ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಹಣ ಅಥವಾ ಬಂಡವಾಳ ದೊರೆಯುತ್ತದೆ. ಒಂದಿಬ್ಬರು ಕೇಂದ್ರ ಮಂತ್ರಿಗಳು ಸೇರಿ ಹಲವು ವಲಯಗಳ ಅನೇಕರಿಂದ ಬಡ್ಡಿ ದರಗಳನ್ನು ಇಳಿಸಬೇಕೆಂಬ ಬೇಡಿಕೆ ಬಲವಾಗಿತ್ತು. ಇದರಿಂದ ಅರ್ಥವ್ಯವಸ್ಥೆಯಲ್ಲಿ ಬಡ್ಡಿ ದರಗಳು ಕೆಳಗೆ ಬಂದು ಆರ್ಥಿಕ ಚಟುವಟಿಕೆಗಳಿಗೆ ಅವಶ್ಯವಿರುವ ಬಂಡವಾಳದ ವೆಚ್ಚ ಕಡಿಮೆಯಾಗುತ್ತದೆ ಮತ್ತು ಜಿಡಿಪಿ ಬೆಳವಣಿಗೆಗೆ ಪೂರಕವಾಗುತ್ತದೆ ಎಂಬುದು ಅವರ ಮನದಾಳದ ವಾದ. ಸರ್ಕಾರಕ್ಕೆ ಮುಜುಗರವಾಗದಂತೆ ಈಗ ಕುಸಿದಿರುವ ಜಿಡಿಪಿ ಬೆಳವಣಿಗೆ ಮುಂದಿನ ತ್ರೈಮಾಸಿಕದಲ್ಲಾದರೂ ಚೇತರಿಸಿಕೊಳ್ಳಬೇಕು ಎನ್ನುವ ಅಭಿ ಪ್ರಾಯವೂ ಇರಬಹುದು. ಆದರೆ ಹಣದುಬ್ಬರ ತನ್ನ ನೀತಿಯ ಗರಿಷ್ಟ ಮಿತಿಯನ್ನು (ಶೇ. ೬. ೦ರ ಮಿತಿ) ಮೀರಿ ಮೇಲೆ ಇರುವುದರಿಂದ ಬಡ್ಡಿ ದರಗಳನ್ನು ಇಳಿಸುವುದು ಅಪಾಯಕಾರಿ ಎಂಬ ಅಭಿಪ್ರಾಯಕ್ಕೆ ಬಂದಿರುವ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ವ್ಯವಸ್ಥೆಗೆ ನಗದು ಹರಿವಿನ ಗಾತ್ರವನ್ನು (ಬ್ಯಾಂಕ್ ಸಾಲಗಳನ್ನು) ಹೆಚ್ಚಿಸುವಂತೆ ಸಿಆರ್‌ಆರ್ ಇಳಿಸುವ ಕ್ರಮವನ್ನು ಕೈಗೊಂಡಿದೆ. ಬಂಡವಾಳದ ಮೇಲಿನ ವೆಚ್ಚ ಕಡಿಮೆಯಾಗಿಲ್ಲ.
ಬೆಳವಣಿಗೆ ಹಣದುಬ್ಬರ: ಆರ್ಥಿಕ ನೀತಿಯ ಅಂತಿಮ ಗುರಿ ಜನರ ಜೀವನ ಮಟ್ಟವನ್ನು ಸುಧಾರಿಸುವುದೇ ಆಗಿರುತ್ತದೆ. ಪೂರೈಕೆ ಮತ್ತು ಬೇಡಿಕೆಗಳನ್ನನುಸರಿಸಿ ಬೆಲೆಗಳು ನಿರ್ಧಾರವಾಗುತ್ತವೆ ಎಂಬುದು ಅರ್ಥಶಾಸ್ತ್ರದ ಮೂಲ ಸಿದ್ಧಾಂತಗಳಲ್ಲೊಂದು. ಇಂದು ಜಾಗತೀಕರಣದ ಕಾರಣದಿಂದ ಜಗತ್ತೇ ಒಂದು ಹಳ್ಳಿಯಂತಾಗಿದೆ. ಒಂದು ದೇಶದಲ್ಲಿಯ ಬದಲಾವಣೆಗಳು ಇನ್ನೊಂದು ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಆಮದು ಮತ್ತು ರಫ್ತು ದೇಶದ ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ. ಇಂದು ಜಾಗತಿಕ ಭೌಗೋಳಿಕ ರಾಜಕೀಯ ಸ್ಥಿತಿ ದಿನಕ್ಕೊಂದು ರೂಪ ಪಡೆಯುತ್ತಿದೆ.
ಇದು ನಮ್ಮಂತಹ ಬೆಳೆಯುತ್ತಿರುವ ದೊಡ್ಡ ಅರ್ಥ ವ್ಯವಸ್ಥೆಯ ಪೂರೈಕೆ ಸರಪಳಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಣದುಬ್ಬರ ಪೂರೈಕೆಯ ಸರಪಳಿಯ ವ್ಯತ್ಯಾಸಗಳಿಂದಲೂ ಹೆಚ್ಚಾಗುತ್ತದೆ. ಉತ್ಪಾದನಾ ವೆಚ್ಚಗಳು ಹೆಚ್ಚಾಗಿ ಬೆಲೆಗಳು ಏರಲು ಕಾರಣವಾಗುತ್ತದೆ. ಇದರಿಂದ ಬೇಡಿಕೆ ಕುಸಿಯುವ ಸಾಧ್ಯತೆಗಳಿವೆ. ಬೇಡಿಕೆ ಕಡಿಮೆಯಾದಾಗ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಕಡಿಮೆಯಾಗಬಹುದು. ಪರಿಣಾಮ ಬೆಳವಣಿಗೆ ಮೇಲೆ ಏಟು. ಸರ್ಕಾರ ಪೂರೈಕೆ ಸರಪಳಿಯನ್ನು ಸುಸ್ಥಿರವಾಗಿಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಉದ್ಯೋಗಾವಕಾಶ ಸೃಷ್ಟಿ ಮತ್ತು ಜನರ ಕೈಗೆ ಕೊಳ್ಳುವ ಶಕ್ತಿ ತುಂಬಬೇಕಾಗುತ್ತದೆ. ಆಗ ಹಣದುಬ್ಬರ ನಿಯಂತ್ರಣವಾಗಿ ಬೆಳವಣಿಗೆ ಕಾಣಲೇಬೇಕು