Mysore
25
haze

Social Media

ಬುಧವಾರ, 07 ಜನವರಿ 2026
Light
Dark

ಪೊಲೀಸ್‍ ಪಾತ್ರದಲ್ಲಿ ಸುಧಾರಾಣಿ; ‘ಚೌಕಿದಾರ್’ ಚಿತ್ರಕ್ಕೆ ಎಂಟ್ರಿ

‘ಚೈತ್ರದ ಪ್ರೇಮಾಂಜಲಿ’ ಖ್ಯಾತಿಯ ಶ್ವೇತಾ, 20 ವರ್ಷಗಳ ವಿರಾಮದ ನಂತರ ಚಂದ್ರಶೇಖರ್‍ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‍’ ಚಿತ್ರದಲ್ಲಿ ಶ್ವೇತಾ ನಟಿಸುತ್ತಿದ್ದಾರೆ ಎಂಬು ಸುದ್ದಿಯೊಂದು ಕೇಳಿಬಂದಿತ್ತು. ಈಗ ಈ ಚಿತ್ರಕ್ಕೆ ಮತ್ತೊಬ್ಬ ಹಿರಿಯ ನಟಿ ಸುಧಾರಾಣಿ ಎಂಟ್ರಿಯಾಗಿದೆ.

ಹೌದು, ‘ಚೌಕಿದಾರ್‍’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಟ್ರಾಫಿಕ್‍ ಇನ್‍ಸ್ಪೆಕ್ಟರ್‍ ಆಗಿ ನಟಿಸುತ್ತಿದ್ದಾರೆ. ಪೊಲೀಸ್‍ ಪಾತ್ರದಲ್ಲಿ ಸುಧಾರಾಣಿ ಅವರು ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, ಜಗ್ಗೇಶ್‍ ನಿರ್ದೇಶನದ ’ಗುರು’ ಚಿತ್ರದಲ್ಲೂ ಪೊಲೀಸ್‍ ಇನ್‍ಸ್ಪೆಕ್ಟರ್‍ ಆಗಿ ನಟಿಸಿದ್ದರು. ಈಗ ಟ್ರಾಫಿಕ್‍ ಇನ್‍ಸ್ಪೆಕ್ಟರ್ ಆಗಿ ಬಂದಿದ್ದಾರೆ ಅಷ್ಟೇ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಶೇಖರ್‍ ಬಂಡಿಯಪ್ಪ, ‘ಇದೊಂದು ಕೌಟುಂಬಿಕ ಚಿತರ. ರೇಶ್ಮೆ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗುತ್ತದೆ. ಇದು ಯಾವ ನೈಜ ಘಟನೆಯನ್ನು ಆಧರಿಸಿಲ್ಲದಿದ್ದರೂ, ನಾಯಕ, ನಾಯಕಿ ಮತ್ತು ನಾಯಕನ ಅಪ್ಪನ ಪಾತ್ರಗಳನ್ನು ನೋಡಿರೆ, ಇವರು ಎಲ್ಲಾ ಕುಟುಂಬಗಳಲ್ಲೂ ಕಾಣಿಸುತ್ತಾರೆ. ಇದೇ ಮೊದಲ ಬಾರಿಗೆ ಪೃಥ್ವಿ ಮಾಸ್‍ ಪಾತ್ರ ಮಾಡುತ್ತಿದ್ದಾರೆ. ಇವತ್ತಿನ ತಲೆಮಾರಿನವರ ಕಥೆ ಇದಾಗಿದ್ದು, ಅವರಿಗೆ ಬಹಳ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದಿದ್ದರು.

ಇದುವರೆಗೂ ಪ್ರೇಮಕಥೆಗಳಲ್ಲೇ ಹೆಚ್ಚಾಗಿ ಅಭಿನಯಿಸಿದ್ದ ಪೃಥ್ವಿ ಅಂಬಾರ್, ‘ಚೌಕಿದಾರ್’ ಚಿತ್ರದಲ್ಲಿ ಮಾಸ್‍ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರಂತೆ. ಪೃಥ್ವಿಗೆ ನಾಯಕಿಯಾಗಿ ಧನ್ಯಾ ರಾಮ್‍ಕುಮಾರ್‍ ಅಭಿನಯಿಸುತ್ತಿದ್ದಾರೆ. ಇದು ಪೃಥ್ವಿ ಮತ್ತು ಧನ್ಯಾ, ನಾಯಕ-ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ. ಪೃಥ್ವಿ ತಂದೆಯಾಗಿ ಸಾಯಿಕುಮಾರ್‍ ನಟಿಸಿದರೆ, ತಾಯಿಯ ಪಾತ್ರದಲ್ಲಿ ಶ್ವೇತಾ ನಟಿಸುತ್ತಿರುವ ಸುದ್ದಿ ಇದೆ. ಇನ್ನು, ವಿಲನ್‍ ಪಾತ್ರದಲ್ಲಿ ಧರ್ಮ ನಟಿಸುತ್ತಿದ್ದಾರೆ.

‘ಚೌಕಿದಾರ್‍’ ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್, VS ಎಂಟರ್ ಟೈನ್ಮೆಂಟ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Tags:
error: Content is protected !!