ಬೆಂಗಳೂರು: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ತಾಯಂದಿರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತದ ಘಟನೆ ನಡೆದು ಹೋಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ವಿರೋಧ ಪಕ್ಷಗಳ ಸಹಕಾರವು ಆಗತ್ಯ. ನಾನು ರಾಜೀನಾಮೆ ನೀಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಎಂದರೆ ಅದಕ್ಕೂ ಸಿದ್ಧನಿದ್ದೇನೆ ಎಂದರು.
ನವೆಂಬರ್.9ರಂದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್‌ಗೆ ಒಳಗಾದ 7 ಮಂದಿ ಗರ್ಭಿಣಿಯರಿಗೆ ಲ್ಯಾಕ್ಟೇಟ್ ದ್ರಾವಣ ನೀಡಿ ಹೆರಿಗೆ ಮಾಡಿಸಲಾಗಿತ್ತು. ಇದರ ಪರಿಣಾಮದಿಂದ ನವೆಂಬರ್.10ರಂದು ಇಬ್ಬರು ಸಾವನ್ನಪ್ಪಿದ್ದರು. ಇದಾದ ಬಳಿಕ 5 ಮಂದಿ ಬಾಣಂತಿಯರನ್ನು ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅದಾದ ಮೂರು ದಿನ ಬಳಿಕ ಓರ್ವ ಬಾಣಂತಿ ಸಾವನ್ನಪ್ಪಿದ್ದು, ಗುರುವಾರವೂ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ.5ಕ್ಕೆ ಏರಿಕೆಯಾಗಿದೆ.
ಸರ್ಕಾರದಿಂದ ಮೃತ ತಾಯಂದಿರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ. ರಾಜ್ಯದಲ್ಲಿ ಹೆರಿಗೆಗೆ ಸಂಬಂಧಿಸಿದಂತೆ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಒಟ್ಟು 327 ಸಾವುಗಳು ಸಂಭವಿಸಿವೆ. ಎಲ್ಲ ಪ್ರಕರಣಗಳ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದೇವೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಸೂಚನೆ ನೀಡಿದರು.