Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಹಿಂದ,ಶೋಷಿತ ವರ್ಗಗಳ ಶಕ್ತಿಯನ್ನು ಕಸಿಯುತ್ತಿರುವ ಕೇಂದ್ರ ಸರ್ಕಾರ: ರಣದೀಪ್‌ಸಿಂಗ್‌ ಸುರ್ಜೆವಾಲ

ಹಾಸನ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೇಶದಲ್ಲಿ ಶೋಷಿತ, ಅಹಿಂದ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಬಲಪಡಿಸುವ ಉದ್ದೇಶದಿಂದ ಸಂವಿಧಾನವನ್ನು ರಚಿಸಿದ್ದಾರೆ. ಆದರೆ, ಇದೀಗ ಕೇಂದ್ರ ಸರ್ಕಾರ ಶೋಷಿತ ವರ್ಗಗಳ ಶಕ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೆವಾಲ ಆರೋಪಿಸಿದ್ದಾರೆ.

ಈ ಕುರಿತು ಇಂದು(ಡಿ.5) ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ತೆರಿಗೆಯನ್ನು ಶೇ.33 ರಿಂದ ಶೇ.22ಕ್ಕೆ ಇಳಿಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿಯನ್ನು ನೀಡುತ್ತಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ 58 ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ಬಡವರ ಖಾತೆಗೆ ಜಮೆ ಮಾಡುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ದಾಳಿ ಮಾಡುವ ಮುಖಾಂತರ ಬಡವರ, ದುರ್ಬಲ ವರ್ಗದವರ ಶಕ್ತಿಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನದ ಆಶಯಗಳಂತೆ ನಮ್ಮ ಕಾಂಗ್ರೆಸ್‌ ಸರ್ಕಾರ ದಲಿತ, ಬಡವರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರು ಸೇರಿದಂತೆ ಸರ್ವರ ಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಆದರೆ ಕೇಂದ್ರ ಸರ್ಕಾರ, ಉದ್ಯಮಿಗಳ 78 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡುತ್ತಿದ್ದು, ಕರ್ನಾಟಕ ರಾಜ್ಯದ ಪಂಚ ಗ್ಯಾರಂಟಿಗಳ ಮೊತ್ತವನ್ನು ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ, ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ವಿರೋಧ ಪಕ್ಷಗಳಾಗಲಿ ಪಂಚ ಗ್ಯಾರಂಟಿಗಳನ್ನು ತಡೆಯಲು ಸಾಧ್ಯವಿಲ್ಲ. ಗ್ಯಾರಂಟಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತೇವೆ. ಯಾರೇ ಏನೇ ಮಾಡಿದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಇರುವವರೆಗೂ ಗ್ಯಾರಂಟಿಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

 

 

 

Tags: