ಹಾಸನ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ನಿಲ್ಲುವುದಿಲ್ಲ, ರಾಜ್ಯದಲ್ಲಿ ಮತ್ತೊಮ್ಮೆ 2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಎಸ್.ಎಂ.ಕೃಷ್ಣನಗರದಲ್ಲಿ ಇಂದು(ಡಿ.5) ಆಯೋಜಿಸಲಾಗಿದ್ದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ಸಾಯುವವರೆಗೂ ಸಿಎಂ ಸಿದ್ದರಾಮಯ್ಯರ ಜೊತೆಗೆ ಇರುತ್ತದೆ. ನಾವು ಎಲ್ಲಿ ಕೆಲಸ ಮಾಡುತ್ತಿವೋ ಅಲ್ಲಿ ನಾವು ಪ್ರಾಮಾಣಿಕವಾಗಿರುತ್ತೇವೆ ಇದು ನಮ್ಮ ಇತಿಹಾಸ. ಕಾಂಗ್ರೆಸ್ ಶಕ್ತಿ, ಇಡೀ ದೇಶದ ಶಕ್ತಿಯಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಸಮುದಾಯಗಳು ಅಧಿಕಾರಕ್ಕೆ ಬಂದಂತೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. 2028ಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಟೀಕೆಗಳಿಗೆ ಉಪಚುನಾವಣೆಯಲ್ಲಿ ರಾಜ್ಯದ ಜನತೆ ಉತ್ತರ ನೀಡಿದ್ದು, ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಬೆರೆ ಏರಿಕೆಯಿಂದ ತತ್ತರಿಸಿದ್ದ ಸಮಾಜಕ್ಕೆ ಶಕ್ತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇಡೀ ಜಿಲ್ಲೆಗೆ ಹಾಗೂ ನೊಂದ ತಾಯಂದಿರಿಗೆ ನ್ಯಾಯವನ್ನು ಕೊಡಿಸುವ ಸಲುವಾಗಿ ಹಾಸನದಲ್ಲಿ 25 ವರ್ಷದ ನಂತರ ಲೋಕಸಭೆಯ ಸಂಸದ ಸ್ಥಾನಕ್ಕೆ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌ರನ್ನು ಸಂಸದರಾಗಿ ಆರಿಸುವ ಮೂಲಕ ನ್ಯಾಯ ದೊರಕಿಸಿಕೊಟ್ಟಿರುವುದಕ್ಕೆ ನಾನು ಸಾಷ್ಟಾಂಗ ನಮಸ್ಕರಿಸುತ್ತೇನೆ ಎಂದಿದ್ದಾರೆ.