Mysore
20
overcast clouds

Social Media

ಶುಕ್ರವಾರ, 02 ಜನವರಿ 2026
Light
Dark

ತಮಿಳುನಾಡು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಫೆಂಗಲ್‌ ಚಂಡಮಾರುತ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ನೆರೆ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಅವರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ರಿಂದ ಮಾಹಿತಿ ಪಡೆದಿದ್ದು, ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಭಾರೀ ಮಳೆಯಿಂದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯು ಸಂಪೂರ್ಣ ಮುಳುಗಡೆಯಾಗಿದೆ. ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದು, ಜಿಲ್ಲೆಯ ಹಲವು ಕಡೆ ಸಾವು- ನೋವು, ಬೆಳೆ ನಷ್ಟ, ಜನಜೀವನ ಅಸ್ತವ್ಯಸ್ತವಾಗಿದೆ.

ಹಲವು ಕಡೆ ಸೇತುವೆಗಳು ಮತ್ತು ರಸ್ತೆಗಳು ಮುಳುಗಿ ಹೋಗಿ ಹಳ್ಳಿಗೆ, ವಸತಿ ಕಾಲೋನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ, ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ.

ಡಿ.1ರಂದು ರಾತ್ರಿ ತಿರುವಣ್ಣಾಮಲೈನಲ್ಲಿ ಸುರಿದ ಮಳೆಗೆ ಬಂಡೆಯೊಂದು ಮನೆ ಮೇಲೆ ಬಿದ್ದು ಏಳು ಮಂದಿ ಸಿಲುಕಿಹಾಕಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಮರುಸ್ಥಾಪನೆ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) 2,000 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ತಮಿಳುನಾಡು ಸಿಎಂ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಅಂದಾಜಿನ ಪ್ರಕಾರ ಮರಸ್ಥಾಪನೆಗಾಗಿ ಸುಮಾರು 2,475 ಕೋಟಿ ರೂಪಾಯಿ ಅಗತ್ಯವಿದೆ ಎಂದು ಸಿಎಂ ತಾವು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆದಷ್ಟು ಬೇಗ ಕೇಂದ್ರ ತಂಡವನ್ನು ನಿಯೋಗಿಸಿ ಹಾನಿಯಾಗಿರುವ ಪ್ರದೇಶದ ಬಗ್ಗೆ ಸಮೀಕ್ಷೆ ನಡೆಸಿ ನೆರವು ನೀಡಬೇಕು ಎಂದು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

 

Tags:
error: Content is protected !!