ಬಸವಕಲ್ಯಾಣ: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಈ ಮೂರೂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನತೆ ಪ್ರತಿಪಕ್ಷಗಳ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಾಖ್ಯಾನಿಸಿದ್ದಾರೆ.
ಬಸವಕಲ್ಯಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗ ಮಾತನಾಡಿದ ಅವರು, ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ನಡೆದ ಈ ಉಪ ಚುನಾವಣೆಯಲ್ಲಿ ಅಭಿವೃದ್ಧಿಗೆ ಒಲವು, ಗ್ಯಾರಂಟಿಗಳಿಗೆ ಗೆಲುವು ನೀಡಿರುವ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಶಿಗ್ಗಾವಿಯಲ್ಲಿ ವಚನಭ್ರಷ್ಟರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಆ ಕ್ಷೇತ್ರದ ಉಸ್ತುವಾರಿಯಾಗಿದ್ದ ತಾವು ಮತದಾರರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸುವುದಾಗಿ ಈಶ್ವರ ಖಂಡ್ರೆ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಮೂರೂ ಉಪ ಚುನಾವಣೆಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಎಲ್ಲರ ಸಂಘಟಿತ ಪ್ರಯತ್ನಕ್ಕೆ ಈ ಗೆಲುವಿನ ಹಾರ ಸಂದಿದೆ. ಉತ್ತಮ ನಾಯಕತ್ವ ನೀಡಿ ಮಾರ್ಗದರ್ಶನ ಮಾಡಿದ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಕಾಂಗ್ರೆಸ್ ಸಚಿವರು, ಶಾಸಕರಿಗೆ ಈ ಗೆಲುವಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು,
ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತಕ್ಕೆ ಸಂದ ಜಯವಾಗಿದೆ. ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ, ನಮ್ಮ ಜನಪರ ಕಾರ್ಯಕ್ರಮ ಮುಂದಿಟ್ಟು ಚುನಾವಣೆಗೆ ಹೋದೆವು, ಜನ ಬೆಂಬಲ ನೀಡಿದ್ದಾರೆ. ಈಗಲಾದರೂ ಪ್ರತಿಪಕ್ಷಗಳು ಎಚ್ಚೆತ್ತು, ರಾಜಕೀಯ ಮತ್ತು ಅಪಪ್ರಚಾರ ಬಿಟ್ಟು, ರಾಜ್ಯದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಬೇಕು.
ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಲ್ಲಿನ ಮತದಾರರು ಒಲವು ತೋರಿದ್ದಾರೆ. ಆದರೆ ಮಹಾರಾಷ್ಟ್ರದ ಫಲಿತಾಂಶ ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ. ಬಿಜೆಪಿ ಮತ್ತು ಮಹಾಯುತಿ ಹಣದ ಹೊಳೆಯನ್ನೇ ಹರಿಸಿತು, ಅಧಿಕಾರದ ದುರ್ಬಳಕೆ ಮಾಡಿಕೊಂಡು ಈ ಚುನಾವಣೆ ಗೆದ್ದಿದೆ ಎಂದೂ ಈಶ್ವರ ಖಂಡ್ರೆ ಹೇಳಿದರು.