Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಾಡಿ ಜನರ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ: ಸಿಇಒ ಗಾಯತ್ರಿ

ಹೆಚ್‌.ಡಿ ಕೋಟೆ: ಹೆಚ್.ಡಿ ಕೋಟೆ ಹಾಗೂ ಸರಗೂರು ತಾಲ್ಲೂಕುಗಳ ಹಾಡಿಗಳಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ  ಸೂಚಿಸಿದರು.

ಹೆಚ್.ಡಿ ಕೋಟೆ ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ ಗುರುವಾರ ಹೆಚ್.ಡಿ.ಕೋಟೆ ಹಾಗೂ ಸರಗೂರು ವ್ಯಾಪ್ತಿಯ ಹಾಡಿಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಅರಣ್ಯ ಇಲಾಖೆ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಹಾಡಿಗಳಲ್ಲಿ ಪ್ರತಿ ಕುಟುಂಬಕ್ಕೂ ಪಿಎಂ ಜನ್ ಮನ್ ಯೋಜನೆಯಡಿ ಮನೆ ನಿರ್ಮಾಣ ಮಾಡಿ. ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸಿ ಹಾಗೂ ಮತ್ತೆ ಮನೆಗಳು ಬೇಕಾದಲ್ಲಿ ಬೇಡಿಕೆ ಸಲ್ಲಿಸಿ ಅಲ್ಲದೇ ಎಸ್.ಬಿ.ಎಂ. ಯೋಜನೆಯಡಿ ಶೌಚಾಲಯ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದನಕೊಟ್ಟಿಗೆ ಇನ್ನಿತರ ಕಾಮಗಾರಿಗಳನ್ನು ಪ್ರತಿ ಕುಟುಂಬಕ್ಕೂ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹಾಡಿಗಳಲ್ಲಿ ವಲಸೆ ಹೋಗುತ್ತಿರುವುದು ಕಂಡುಬಂದಿದ್ದು, ವಲಸೆ ಹೋಗುವವರನ್ನು ತಡೆಯಬೇಕು, ಆ ಭಾಗಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಿ ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು, ಆಧಾರ್, ರೇಷನ್ ಕಾರ್ಡ್, ಆಭಾ ಕಾರ್ಡ್, ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳಿಗೆ ತಾಲ್ಲೂಕು ಅಧಿಕಾರಿಗಳ ತಂಡ ಕ್ಯಾಂಪ್ ಮಾಡುವ ಮೂಲಕ ಸ್ಥಳದಲ್ಲೇ ಎಲ್ಲರಿಗೂ ಆಧಾರ್, ರೇಷನ್ ಕಾರ್ಡ್, ಅಭಾ ಕಾರ್ಡ್, ಜಾಬ್ ಕಾರ್ಡ್ ಗಳ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.

ಈಗಾಗಲೇ ಶೌಚಾಲಯ ಬಳಸಿ ಅಭಿಯಾನ ನಡೆಯುತ್ತಿರುವ ಹಿನ್ನಲೆ ಹಾಡಿಗಳಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸಬೇಕು, ಯಾವ ಹಾಡಿಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ ಅಲ್ಲಿ ಸಮುದಾಯ ಶೌಚಾಲಯ ನಿರ್ಮಿಸಬೇಕು. ಈ ರೀತಿ ಶೌಚಾಲಯ ಇದ್ದರೆ ಹಾಡಿ ಜನರು ಶೌಚಕ್ಕಾಗಿ ಕಾಡಿನೊಳಗೆ ಹೋಗುವುದಿಲ್ಲ, ಇದರಿಂದ ಪ್ರಾಣಿಗಳು ಕೂಡ ದಾಳಿ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.

ಕಾಡಂಚಿನ ಆರೋಗ್ಯ ಕೇಂದ್ರಗಳ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಗ್ರಾಮ ಪಂಚಾಯತಿಗಳು ಸಹಕರಿಸಬೇಕು, ಹಾಡಿ ಜನರು ಆರೋಗ್ಯ ಕೇಂದ್ರಗಳಿಗೆ ಹೋಗಲು ವಾಹನದ ವ್ಯವಸ್ಥೆಯನ್ನು ಸಹಾ ಮಾಡಬೇಕು, ಅನಾರೋಗ್ಯ ಸಮಯದಲ್ಲಿ ಹಾಡಿಗಳಿಂದ ನಡೆದುಕೊಂಡು ಬರಲು ಆಗುವುದಿಲ್ಲ ಅದಕ್ಕಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಾಹನ ಖರೀದಿ ಮಾಡಬೇಕು ಎಂದು ಹೇಳಿದರು.

ಹಾಡಿ ಜನರಿಗೆ ನರೇಗಾ ಯೋಜನೆಯಡಿ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ನಡೆಯಬೇಕು ಹಾಗೂ ಆರೋಗ್ಯ ವಿಮೆ ಮಾಡಿಸಬೇಕು. ಅಂಗನವಾಡಿ ಇಲ್ಲದ ಕಡೆ ಅಲ್ಲಿನ ಶಾಲೆಗಳಲ್ಲಿ ಕೊಠಡಿ ಇದ್ದರೆ ಅದನ್ನು ಉಪಯೋಗಿಸಿ ಇಲ್ಲವಾದರೆ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಅಧಿಕಾರಿಗಳು ನಿಗಾವಹಿಸಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಅವಶ್ಯಕತೆ ಇದ್ದಲ್ಲಿ ಬೋರ್ ವೆಲ್ ತೆಗೆಸಲು ಕ್ರಮವಹಿಸಿ ಹಾಗೂ ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿರುವ ಕುಟುಂಬಗಳನ್ನು ಯೋಜನೆಗೆ ಸೇರಿಸಲು ಪಿಡಿಓಗಳು ಕ್ರಮವಹಿಸಿ ಎಂದು ಹೇಳಿದರು.

ಸಭೆಗೂ ಮುನ್ನ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯಿತಿಯ ಆಲನಹಳ್ಳಿ ಗ್ರಾಮದ ಶಾಲಾ ಅಭಿವೃದ್ಧಿ, ರೈತನ ಜಮೀನಿನಲ್ಲಿ ಹಿಪ್ಪುನೇರಳೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಲಿಕಾರರು ಹಾಗೂ ಫಲಾನುಭವಿಯೊಡನೆ ಸಮಾಲೋಚನೆ ನಡೆಸಿದರು. ಶಾಲಾ ಆವರಣದಲ್ಲಿ ಶಾಲಾ ಮಕ್ಕಳೊಡನೆ ಸಮಾಲೋಚನೆ ನಡೆಸಿ,ತಮ್ಮತೆ ದೊಡ್ಡ ಅಧಿಕಾರಿಗಳಾಗುವಂತೆ ಪ್ರೇರಿಪಿಸಿದರು. ಬಿಸಿಯೂಟ ಅಡಿಗೆ ಕೋಣೆ ಪರಿಶೀಲಿಸಿ,ಶುಚಿತ್ವ ಕಾಪಾಡಿಕೊಳ್ಳು ತಿಳಿಸಿದರು.

ಸಭೆಯಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಹೆಚ್.ಡಿ.ಕೋಟೆ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಪಿ ಧರಣೇಶ್, ಸರಗೂರು ಕಾರ್ಯ ನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Tags: