Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ತುಂಬಿ ಹರಿಯುತ್ತಿರುವ ಪಂಚ ನದಿಗಳು

ರಂಗಸ್ವಾಮಿ ಸಂತೆ ಬಾಚಹಳ್ಳಿ

ನೀರು ತುಂಬಿ ಹರಿವ ನದಿಯ ಸೌಂದರ್ಯ ದೃಶ್ಯಕಾವ್ಯವೇ ಸರಿ. ಇತ್ತೀಚೆಗೆ ಬಿಡದೇ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿರುವ ಪಂಚ ನದಿಗಳಿಗೆ ಮರುಜೀವ ಬಂದಂತಿದೆ. ನಾಗಮಂಗಲದ ಹಸುವಿನ ಕಾವಲು ಪ್ರದೇಶ ಹಾಗೂ ಕೃಷ್ಣರಾಜಪೇಟೆಯ ಸಂತೇಬಾಚಳ್ಳಿಯ ಪ್ರದೇಶಗಳಲ್ಲಿ ಲೋಕಪಾವನಿ, ವೀರವೈಷ್ಣವಿ, ಕೇತಕಾ, ಜಾಗಿನಕೆರೆ ಮತ್ತು ರಾಯಸಮುದ್ರ ಎಂಬ ಐದು ಉಪನದಿಗಳು ಹರಿಯುತ್ತಿವೆ.

ನಾಗಮಂಗಲದ ಬೊಮ್ಮನಾಯಕನಹಳ್ಳಿಯಿಂದ ಆರಂಭವಾಗುವ ಲೋಕಪಾವನಿ ನದಿಯ ಹರಿವು ಹಂದೆನಳ್ಳಿ, ಕರಿಕ್ಯಾತ್ನಳ್ಳಿ, ಕಳ್ಳಿಗುಂದಿ, ಮಾರನಾಯಕನಹಳ್ಳಿ, ಹೊಣಕೆರೆಯಂತಹ ಹಳ್ಳಿಗಳಿಗೂ ವ್ಯಾಪಿಸಿದೆ. ಪಾಂಡವಪುರ ಮಾರ್ಗವಾಗಿ ಶ್ರೀರಂಗಪಟ್ಟಣದ ಕರಿಕಲ್ಲು ಬೆಟ್ಟದ ಸಮೀಪ ಕಾವೇರಿ ನದಿಯೊಂದಿಗೆ ಸಂಗಮವಾಗುವುದು ಈ ನದಿಯ ವಿಶೇಷ. ಇನ್ನು ನಾಗಮಂಗಲದ ಹಸುವಿನ ಕಾವಲು ಮತ್ತು ಗಿಡದ ಚೆಲ್ಲಾಪುರ ಪ್ರದೇಶಗಳ ಹಳ್ಳಗಳಲ್ಲಿ ಹುಟ್ಟುವ ನದಿಯೇ ವೀರ ವೈಷ್ಣವಿ. ವಡ್ಡರಹಳ್ಳಿ, ಸಾತೇನಹಳ್ಳಿ ಹಳ್ಳದ ಮೂಲಕ ಕೊಡಳ್ಳಿ, ಹೊನ್ನಾವರ, ಬಿಂಡಿಗನವಿಲೆ ಕೆರೆಯ ಮಾರ್ಗವಾಗಿ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಅಣೆಕಟ್ಟಿನ ಹಿನ್ನೀರಿನಲ್ಲಿ ಸೇರುತ್ತದೆ.

ಅಲ್ಲಿಂದ ಶಿಂಷಾ ನದಿಯಾಗಿ ಮದ್ದೂರು, ಮಳವಳ್ಳಿ ಮಾರ್ಗವಾಗಿ ಬೆಂಕಿ ಫಾಲ್ಸ್ ಸೇರುತ್ತದೆ. ‘ರಾಮನು ಕೇತಕಾ ನದಿಯನ್ನು ದಾಟಿ ಲಂಕೆಗೆ ಹೋದನು’ ಎಂಬುದಾಗಿ ಉಲ್ಲೇಖವಿರುವುದು, ಬಹುಶಃ ಮಂಡ್ಯ ಜಿಲ್ಲೆಯ ಕೇತಕಾ ನದಿಯ ಬಗ್ಗೆಯೇ ಇರಬಹುದು. ಈ ನದಿ ನಾಗಮಂಗಲದ ತಿರುಗನಹಳ್ಳಿ ಬಾರೆಯಲ್ಲಿ ಹುಟ್ಟಿ, ಸಾಣೇನಹಳ್ಳಿಯ ಮಾರ್ಗವಾಗಿ ನಾಯಕನಹಳ್ಳಿ, ಅಪ್ಪನಹಳ್ಳಿ, ಮಾಳಗೂರು, ಅಘಲಯ, ಕಿಕ್ಕೇರಿ ಕೆರೆಗಳ ಮೂಲಕ ಹೇಮಾವತಿ ನದಿಯನ್ನು ಸೇರುತ್ತದೆ. ಕೆ. ಆರ್. ಪೇಟೆ ತಾಲ್ಲೂಕಿನ ದುಗ್ಗನಹಳ್ಳಿ ಬಾರಿಯ ಹಳ್ಳಗಳಲ್ಲಿ ಹುಟ್ಟುವ ನದಿಯೇ ಜಾಗಿನ ನದಿ. ಜಾಗಿನಕೆರೆ ಮಾರ್ಗವಾಗಿ ಕೈಗೂನಹಳ್ಳಿ, ವಳಗೆರೆಮೆಣಸ, ಅಗ್ರಹಾರಬಾಚಹಳ್ಳಿ, ಕೃಷ್ಣರಾಜಪೇಟೆ, ಹೊಸಹೊಳಲು ಮಾರ್ಗವಾಗಿ ಹೇಮಾವತಿ ನದಿಯನ್ನು ಸೇರುತ್ತದೆ.

ರಾಯಸಮುದ್ರ ನದಿಯೂ ನಾಗಮಂಗಲ ತಾಲ್ಲೂಕಿನ ಕೊರವನಗುಂದಿ ಸಂಽಸುವ ಹಳ್ಳಗಳ ಮೂಲಕ ನಾರಾಯಣದುರ್ಗ ಅರಣ್ಯದೊಳಗೆ ಹರಿದು ಗವಿಮಠ ಮಾರ್ಗವಾಗಿ ಹೇಮಾವತಿ ನದಿಯನ್ನು ತಲುಪುತ್ತದೆ. ಈ ಮೊದಲು ಲೋಕಪಾವನಿ ಮತ್ತು ವೀರ ವೈಷ್ಣವಿ ನದಿಗಳನ್ನು ಮಾತ್ರ ವಿಶೇಷವಾಗಿ ಗುರುತಿಸಲಾಗಿತ್ತು. ಆದರೆ ಕೇತಕಾ, ಜಾಗಿನ ಕೆರೆ ಮತ್ತು ರಾಯಸಮುದ್ರ ನದಿಗಳು ಹರಿಯುವ ಪ್ರದೇಶಗಳಲ್ಲಿ ೩೦ ರಿಂದ ೫೦ ಅಡಿ ಮರಳಿನ ನಿಕ್ಷೇಪಗಳಿದ್ದು, ನುಣುಪಾದ ಕಲ್ಲುಗಳ ರಾಶಿಯೂ ಪತ್ತೆಯಾಗಿವೆ.

ಇದರರ್ಥ ನೂರಾರು ವರ್ಷಗಳ ಹಿಂದೆ ಈ ಉಪನದಿಗಳು ಜೀವಂತ ನದಿಗಳೆಂದು ಕಂಡುಬರುತ್ತವೆ. ಇದಕ್ಕೆ ಪೂರಕವಾಗಿ ಊರ ಹಿರಿಯರು ಕೂಡ ಬರಗಾಲ ಬಂದ ವರ್ಷ ಬಿಟ್ಟರೆ, ಈ ನದಿಗಳು ವರ್ಷವೆಲ್ಲ ಹರಿಯುತ್ತಿದ್ದವು ಎನ್ನುತ್ತಾರೆ. ಇತ್ತೀಚೆಗೆ ಈ ಪ್ರದೇಶಗಳ ಸುತ್ತಲೂ ರಿಗ್ ಬ್ಲಾಸ್ಟ್ ಮೂಲಕ ಭೂತಾಯಿಯ ಎದೆಯನ್ನು ಬಗೆಯುತ್ತಿದ್ದಾರೆ. ಮತ್ತೊಂದೆಡೆ ಮರಳು ಮಾಫಿಯಾದಿಂದ ಅಂತರ್ಜಲ ಕುಸಿದೇಬಿಟ್ಟಿದೆ. ಸಾಲದೆಂಬಂತೆ ಮನೆ, ಜಮೀನುಗಳಲ್ಲಿ ಸಾವಿರಾರು ಬೋರ್ ವೆಲ್‌ಗಳ ನಿರ್ಮಾಣ ಬೇರೆ! ಆಧುನಿಕ ತಂತ್ರಜ್ಞಾನ ತಂದೊಡ್ಡಿದ ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ಮುಂಗಾರು ಮಳೆ ಬಿದ್ದ ಏಳೆಂಟು ತಿಂಗಳು ಇಲ್ಲಿ ಕೊರತೆಯಾಗದಷ್ಟು ನೀರು ಹರಿಯುತ್ತಿರುತ್ತದೆ

Tags: