Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೇಷ್ಟ್ರ ಮಗಳು ಪ್ರಸಾದಕ್ಕೆ ಕಾಯುತ್ತಿದ್ದ ದಿನಗಳು

ಶುಭಮಂಗಳಾ ರಾಮಾಪುರ

ಚಾಮರಾಜನಗರ ಜಿಲ್ಲೆ ಅಂದಕೂಡಲೇ ನೆನಪಿಗೆ ಬರೋದು ನಮ್ಮಪ್ಪಾಜಿ, ಏಳುಮಲೆಯ ಮಾಯಕಾರ ಮುದ್ದು ಮಾದೇವ. ಎಪ್ಪತ್ತೇಳು ಮಲೆಯಲ್ಲಿ ನೆಲೆಸುವ ಸಲುವಾಗಿ ಮಾದಪ್ಪ ಕಾಡಿನ ಮಾರ್ಗದಲ್ಲಿ ಚಲಿಸುತ್ತಿದ್ದಾಗ ನನ್ನೂರು ರಾಮಾಪುರದಲ್ಲಿ ಕೆಲ ಗಳಿಗೆ ವಿಶ್ರಮಿಸಿ ಕೌದಳ್ಳಿ ಮಾರ್ಗವಾಗಿ ಹೋದನೆಂತಲೂ, ಅವನು ಮಲಗಿದ್ದ ಜಾಗದಲ್ಲಿಯೇ ಪುಟ್ಟದೊಂದು ಗುಡಿಯನ್ನು ನಿರ್ಮಿಸಿ ಅಂದಿನಿಂದ ಮಾದಪ್ಪನಿಗೆ ಸದಾಕಾಲ ಪೂಜೆ ಮಾಡಲಾಗುತ್ತಿದೆ ಅಂತನೂ ನನ್ನಜ್ಜಿ ನನಗೆ ಹೇಳಿದ ನೆನಪು.

ಅಂದಿನಿಂದ ಬಹಳಷ್ಟು ವರ್ಷಗಳವರೆಗೆ ದೇವರ ಪೂಜೆಗೆಂದು ಕಾಡಿಗೆ ಹೋಗಿ ಬಿಲ್ವಪತ್ರೆಯನ್ನು ತಂದು ಕೊಡುವ ಕಾಯಕವನ್ನು ನನ್ನಜ್ಜ (ಹೆಸರು ಮಾದಪ್ಪ) ವಹಿಸಿಕೊಂಡಿದ್ದರು. ಪುಟ್ಟಗುಡಿಯೇ ಆದರೂ ಪ್ರತಿದಿನ ಲಿಂಗಸ್ವರೂಪಿಯಾದ ಮಾದೇವನಿಗೆ ಪೂಜೆ ಸಲ್ಲುತ್ತಿತ್ತು. ಕಾರ್ತಿಕ ಮಾಸದಲ್ಲಂತೂ ಗುಡಿಯ ಮುಂದೆ ರಂಗೋಲಿ ಬಿಡಿಸಿ ದೇವರಿಗೆ ವಿಶೇಷ ಅಲಂಕಾರ ಮಾಡುತ್ತಿದ್ದರು. ಇನ್ನೂ ಹೆಚ್ಚಿನ ವಿಶೇಷತೆಯನ್ನು ಕಾಣಬೇಕೆಂದರೆ ಅದಕ್ಕೆ ಧನುರ್ಮಾಸವೇ ಬರಬೇಕಿತ್ತು.

ಕತ್ತಲು ಸರಿಯುವ ಮುನ್ನವೇ ಬಂದು ದೇವರಿಗೆ ಅಭಿಷೇಕ ಮಾಡಿ ಅಲಂಕಾರ ಮಾಡುವ ಕೆಲಸ ಪೂಜಾರಿ ನಾಗರಾಜಣ್ಣನದಾದರೆ ಗುಡಿಯ ಸುತ್ತ ಗುಡಿಸಿ, ಸೆಗಣಿ ನೀರು ಹಾಕಿ ರಂಗೋಲಿ ಬಿಡಿಸಿ ಬಾಗಿಲಿಗೆ ತೋರಣ ಹೂವಿನ ಅಲಂಕಾರವೆಲ್ಲ ಊರಿನ ಕೆಲ ಹೆಂಗಳೆಯರೇ ಮಾಡುತ್ತಿದ್ದರು. ನಸು ಬೆಳಕಿನ ಮುಂಜಾನೆಯೇ ಊರಿನ ಬಹುತೇಕ ಜನರು ಮಾದಪ್ಪನ ದರ್ಶನಕ್ಕೆಂದು ನೆರೆದಿರುತ್ತಿದ್ದರು. ನಾನೂ ಹೋಗುತ್ತಿದ್ದೆ ಮಾದಪ್ಪನ ದರ್ಶನಕ್ಕೆಂದು. ಆದರೆ ನಿಜ ಅದಾಗಿರಲಿಲ್ಲ ಅಲ್ಲಿ ಕೊಡುತ್ತಿದ್ದ ಪ್ರಸಾದಕ್ಕೆಂದು. ಒಂದು ತಿಂಗಳ ಕಾಲ ಬಹಳ ವಿಜೃಂಭಣೆಯಿಂದ ಸಾಗುತ್ತಿದ್ದ ಧನುರ್ಮಾಸ ಪೂಜೆಯಲ್ಲಿ ಪ್ರಸಾದ ವಿನಿಯೋಗವೂ ನಡೆಯುತ್ತಿತ್ತು. ಬಡತನವೇ ಮೇಲಾಗಿದ್ದ ಆ ಕಾಲದಲ್ಲಿ ಅನುಕೂಲವಿದ್ದ ಕೆಲವೇ ಕೆಲವು ಮನೆಯವರು ಪ್ರಸಾದ ತಯಾರಿಸಿ ದೇವಸ್ಥಾನಕ್ಕೆ ಕೊಡುವ ದೊಡ್ಡ ಮನಸ್ಸು ಮಾಡುತ್ತಿದ್ದರು. ದೇವಸ್ಥಾನಕ್ಕೆಂದು ಪ್ರಸಾದ ತಯಾರಿಸಿಕೊಡುವಾಗ ಬಹಳ ಮಡಿವಂತಿಕೆಯೊಂದಿಗೆ ಪರಿಶುದ್ಧರಾಗಿ ನಿಯಮ ಮಾಡುತ್ತಿದ್ದರು.

ಮೇಲಾಗಿ ರುಚಿ ನೋಡುತ್ತಿರಲಿಲ್ಲ, ನೂರಾರು ಜನರಿಗೆ ಪ್ರಸಾದ ತಯಾರಿಸುವಾಗ ರುಚಿಯಲ್ಲಿ ಏರುಪೇರಾಗುವುದುಂಟು. ಜೊತೆಗೆ ಪರಿಕರಗಳ ಕೊರತೆಯೂ ಆಗಬಹುದು. ಆದರೂ ಅದರ ಮೇಲೆ ನಮಗೆ ಎಲ್ಲಿಲ್ಲದ ವ್ಯಾಮೋಹ. ಪಂಚಾಮೃತ, ಸಿಹಿ ಪೊಂಗಲ್, ಕಡ್ಲೆಕಾಳಿನ ಗುಗುರಿ, ಕೋಸಂಬರಿ ಹೀಗೆ ದಿನಕ್ಕೊಂದು ಪ್ರಸಾದ ಸಾಮಾನ್ಯವಾಗಿತ್ತು. ಕೆಲವು ಶ್ರೀಮಂತರು ಸಿಹಿ ಬೂಂದಿಯನ್ನೂ ಮಾಡಿಸಿಕೊಡುತ್ತಿದ್ದರು. ನಮ್ಮದೊಂದು ಬೆಟಾಲಿಯನ್ ಇತ್ತು. ಬೆಳ್ಳಂಬೆಳಿಗ್ಗೆ ಎದ್ದು ಸ್ನಾನ ಮಾಡಿ ಹಣೆಗೆ ಮೂರು ವಿಭೂತಿ ಪಟ್ಟೆಯನ್ನೊಡೆದು ಗಂಧತಿಲಕವನ್ನಿಟ್ಟು ಗುಡಿಯ ಮುಂದೆ ಒಗ್ಗಟ್ಟಾಗಿ ಬಂದು ನಿಂತ್ರೆ, ಆಹಾ ಈ ಮಕ್ಕಳ ಭಕ್ತಿ ನೋಡು ಅಂತ ಕೆಲ ಜನ ಮೂಗಿನ ಮೇಲೆ ಬೆರಳಿಟ್ಟರೆ ನಮ್ಮ ಬಂಡವಾಳ ಗೊತ್ತಿದ್ದ ಕೆಲವರು ಒಳಗೊಳಗೆ ಹುಸಿನಗೆ ನಗುತ್ತಿದ್ದರು.

ಪ್ರಸಾದ ಹಂಚುವ ಕೆಲಸವನ್ನು ನಾಗರಾಜಣ್ಣ ಯಾರಿಗೂ ಕೊಡ್ತಾ ಇರಲಿಲ್ಲ. ತಾವೇ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ದೇವರಿಗೆ ನೈವೇದ್ಯ ತೋರಿದ ಮೇಲೆ ಕೊಟ್ಟ ಪ್ರಸಾದದಲ್ಲಿ ಸ್ವಲ್ಪ ಭಾಗ ಪ್ರಸಾದ ಮಾಡಿಸಿಕೊಟ್ಟ ಮನೆಯವರಿಗೆಂದು ತೆಗೆದಿಟ್ಟರೆ ಇನ್ನು ಸ್ವಲ್ಪ ಭಾಗ ತನ್ನ ಮನೆಗೆಂದು ತೆಗೆದಿಟ್ಟು, ಉಳಿದದ್ದನ್ನು ಜನರಿಗೆ ಕೊಡುತ್ತಿದ್ದರು. ದೇವರ ದರ್ಶನಕ್ಕೆ ಇಲ್ಲದ ರಶ್ಶು ಪ್ರಸಾದ ತಗೊಳ್ಳೋಕೆ ಇರ್ತಾ ಇತ್ತು. ಒಮ್ಮೆ ಬಲಗೈಲಿ ತೆಗೆದುಕೊಂಡರೆ ತಕ್ಷಣಕ್ಕೆ ಎಡಗೈ ಎಂಬುದನ್ನೂ ಮರೆತು ಚಾಚಿ ಬಿಡುತ್ತಿದ್ದೆವು. ಪ್ರಸಾದ ತಿಂದು ಕೈ ತೊಳೆಯುವ ಕೆಲಸವನ್ನು ನಾಲಿಗೆಗೆ ಬಿಟ್ಟುಬಿಡುತ್ತಿದ್ದೆವು. ಅಬ್ಬಾ ಆ ರುಚಿಯ ಮುಂದೆ ನಳಮಹಾರಾಜನ ಮೃಷ್ಟಾನ್ನ ಭೋಜನವೂ ನಿಲ್ಲದು ಅನ್ನೋವಷ್ಟು ಚಂದ. ಜನರೆಲ್ಲ ಮನೆಗೆ ಹೋದರೂ ನಮ್ಮ ಬೆಟಾಲಿಯನ್ ಗುಡಿಯಿಂದ ಕಾಲು ಕೀಳ್ತಾ ಇರಲಿಲ್ಲ.

ಕೈಜೋಡಿಸಿ ಓಂ ನಮಃ ಶಿವಾಯ ಅಂತ ಮಂತ್ರ ಪಠಣಕ್ಕೆ ಕುಳಿತು ಬಿಡ್ತಾ ಇದ್ವಿ. ಜನರೆಲ್ಲ ಕಡಿಮೆಯಾದ ಮೇಲೆ ನಾಗರಾಜಣ್ಣ ತನ್ನ ಮನೆಗೆ ಅಂತ ತೆಗೆದಿಟ್ಟಿದ್ದ ಪ್ರಸಾದದಲ್ಲಿ ನಮಗೂ ಕೊಂಚ ಕೊಡುತ್ತಾರೆ ಅಂತ. ಮೇಷ್ಟ್ರ ಮಗಳು ಪ್ರಸಾದಕ್ಕೆ ಕಾಯ್ತಾ ಕುಂತಿದ್ಲು ಅಂತ ಅಪ್ಪಂಗೆ ಯಾರಾದ್ರು ಚಾಡಿ ಹೇಳಿಬಿಡುತ್ತಾರೆ ಅಂತ ಯಾವಾಗಲೂ ಹಿಂದೆಯೇ ಮರೆಮಾಚಿ ನಿಂತಿರುತ್ತಿದ್ದೆ. ಆದರೆ ನಾಗರಾಜಣ್ಣ ತೇಗದ ಎಲೆಯೊಂದರಲ್ಲಿ ಒಂದು ಹಿಡಿ ಪ್ರಸಾದವನ್ನು ಹಾಕಿ ನಮ್ಮಲ್ಲೊಬ್ಬರ ಕೈಗೆ ಕೊಟ್ಟರೆ ಒಮ್ಮೆಲೆ ಎಂಟು ಕೈಗಳು ಎಲೆಯಲ್ಲಿ ಇರುತ್ತಿದ್ದವು.

ಒಪ್ಪತ್ತಿಗೂ ಗತಿಯಿಲ್ಲದೆ ನಮ್ಮೆಡೆಗೆ ನೋಡುತ್ತಾ ನಿಂತಿದ್ದ ಗುಂಡನಿಗೂ ಸ್ವಲ್ಪಕೊಟ್ಟು ಮನೆಗೆ ನಡೆಯುತ್ತಿದ್ದೆವು. ಕಾಲ ಬದಲಾಗಿದೆ. ಜನರ ಜೀವನ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಪುಟ್ಟ ಗರ್ಭಗುಡಿಗಷ್ಟೇ ಸೀಮಿತವಿದ್ದ ಮಾದೇಶ್ವರನ ಗುಡಿ ಪುನರ್ನಿರ್ಮಾಣಗೊಂಡು ಒಂದು ದೊಡ್ಡ ದೇವಾಲಯವಾಗಿದೆ. ಗೋಪುರಕ್ಕೆ ಕಳಸವೆಲ್ಲಾ ಬಂದಿದೆ. ಆದರೆ ಧನುರ್ಮಾಸಕ್ಕೆಂದು ತಿಂಗಳಿಡೀ ಬೆಳ್ಳಂಬೆಳಿಗ್ಗೆಯೇ ದೇವಾಲಯಕ್ಕೆ ಹೋಗುವ ಜನರೇ ಇಲ್ಲವಾಗಿದೆ. ಕೇವಲ ದೇವರ ಉತ್ಸವ ಕೊಂಡ ನಡೆದಾಗಷ್ಟೇ ಜನರು ಸೇರುತ್ತಾರೆ ಅದೂ ಮೊದಲಿನಷ್ಟಿಲ್ಲ. ಕೆಲವು ದಿನಗಳ ಹಿಂದೆ ಹಬ್ಬಕ್ಕೆಂದು ಊರಿಗೆ ಹೋಗಿದ್ದಾಗ ನಮ್ಮ ಬಾಲ್ಯದ ಗುಂಡ ಸಿಕ್ಕಿದ್ದ. ಅರೆಹೊಟ್ಟೆಗೂ ಗತಿಯಿಲ್ಲದಿದ್ದ ಗುಂಡ ಒಳ್ಳೆಯ ಕೆಲಸಕ್ಕೆ ಸೇರಿ ಬಹಳಷ್ಟು ಸಂಪಾದನೆ ಮಾಡುತ್ತಿದ್ದಾನೆ. ಹೋಳಿಗೆ, ಪಾಯಸ, ಬಗೆಬಗೆಯ ಪಲ್ಯಗಳು ವಿಧವಿಧದ ಊಟ ಮಾಡುವ ಯೋಗವಿದೆ. ಆದರೆ ಅಂದು ನೀವು ನನಗಾಗಿ ಕೊಟ್ಟ ನಿಮ್ಮ ಪಾಲಿನ ಪ್ರಸಾದದ ಮುಂದೆ ಇಂದು ನಾನು ತಿನ್ನುತ್ತಿರುವ ತರಹೇವಾರಿ ಭೋಜನ ಏನೇನೋ ರುಚಿಸದು ಅಂತ ಹೇಳಿದ ಮಾತು ಕೇಳಿ ಬಹಳ ಆನಂದವಾಯಿತು.

 

 

Tags: