Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಆಂದೋಲನ ವಿಶೇಷ: ಸ್ಯಾಟ್‌ಲೈಟ್‌ ನಿಲ್ದಾಣ ಮಾದರಿ; ಒತ್ತಡ ತಗ್ಗಿಸಲು ದಾರಿ

 

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಒತ್ತಡವನ್ನು ತಗ್ಗಿಸಲು ಸಾರಿಗೆ ಇಲಾಖೆಯು ಸಬ್ ಅರ್ಬನ್ ಬಸ್ ನಿಲ್ದಾಣದ ಎದುರು ಇರುವ ಪೀಪಲ್ಸ್ ಪಾರ್ಕ್‌ನ ೩. ೫ ಎಕರೆ ಜಾಗ ಪಡೆದು ಕಾರ್ಯಾಚರಣೆಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಈ ಚಿಂತನೆ ತಾತ್ಕಾಲಿಕ ಪರಿಹಾರವಷ್ಟೆ. ಮುಂದಿನ ೫೦-೬೦ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸ್ಯಾಟ್‌ಲೈಟ್ ನಿಲ್ದಾಣ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಬೇಕಿದೆ. ಅಲ್ಲದೆ, ಈ ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳಿಗೆ ನಗರ ಸಾರಿಗೆ ಬಸ್‌ಗಳನ್ನು ಸಂಪರ್ಕ ಕಲ್ಪಿಸಿ ಕಾರ್ಯಾಚರಣೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆಯನ್ನು ಹುಟ್ಟು ಹಾಕುವ ಸಲುವಾಗಿ ‘ಆಂದೋಲನ’ ದಿನಪತ್ರಿಕೆಯು ವಿಶೇಷ ವರದಿಯನ್ನು ಪ್ರಕಟಿಸಿದೆ.

ಮೈಸೂರು: ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬಸ್‌ಗಳು ಹಾಗೂ ಪ್ರಯಾಣಿಕರ ಒತ್ತಡ ಮಿತಿಮೀರಿದ್ದು, ಈ ಒತ್ತಡವನ್ನು ತಗ್ಗಿಸಲು ಸಾರಿಗೆ ಇಲಾಖೆಯು ಸಬ್ ಅರ್ಬನ್ ಬಸ್ ನಿಲ್ದಾಣದ ಎದುರು ಇರುವ ಪೀಪಲ್ಸ್ ಪಾರ್ಕ್‌ನ ೩. ೫ ಎಕರೆ ಜಾಗ ಪಡೆದು ಕಾರ್ಯಾಚರಣೆಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ.

ಈ ಚಿಂತನೆ ತಾತ್ಕಾಲಿಕ ಪರಿಹಾರವಷ್ಟೆ. ಮುಂದಿನ ೧೦-೧೫ ವರ್ಷಗಳ ಒತ್ತಡ ಮತ್ತಷ್ಟು ಜಾಸ್ತಿಯಾಗುತ್ತದೆ. ಹಾಗಾಗಿ ಮುಂದಿನ ೫೦-೬೦ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸ್ಯಾಟ್‌ಲೈಟ್ ನಿಲ್ದಾಣ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಬೇಕಿದೆ. ದಶಕದ ಹಿಂದೆ ಓಬಿರಾಯನ ಕಾಲದ ಮೈಸೂರಿನ ಬಸ್ ನಿಲ್ದಾಣಗಳು ‘ಹೈಟೆಕ್ ಸ್ವರೂಪ’ ಪಡೆದುಕೊಂಡಿದ್ದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಜತೆಗೆ ಬಹುಮುಖ್ಯವಾಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬರುವ ವಾಹನಗಳ ಒತ್ತಡವನ್ನು ಕಡಿಮೆ ಮಾಡಬೇಕೆನ್ನುವುದನ್ನು ಮುಂದಿಟ್ಟು ಕೊಂಡು ಹೊರವಲಯದಲ್ಲಿ ಸ್ಯಾಟ್‌ಲೈಟ್ ನಿಲ್ದಾಣದ ಮಾದರಿಯಲ್ಲಿ ಬಸ್ ನಿಲ್ದಾಣಗಳನ್ನು ಪರಿವರ್ತಿಸಬೇಕಿದೆ. ಬೆಂಗಳೂರಿನ ಸ್ಯಾಟಲೈಟ್ ಮಾದರಿಯಲ್ಲಿ ನಗರದ ಮೂರು ಕಡೆಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದರೂ ಅದರ ನಿರ್ವಹಣೆಗೆ ಆಸಕ್ತಿ ತೋರದ ಕಾರಣ ಕೇಂದ್ರೀಯ ಬಸ್ ನಿಲ್ದಾಣದ ಮೇಲಿನ ಹೊರೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.

ಈ ಕಾರಣಕ್ಕಾಗಿಯೇ ಸಾತಗಳ್ಳಿಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಯಿತು. ಆದರೆ, ಈ ಕಾರ್ಯಾಚರಣೆ ಪ್ರಾಯೋಗಿಕವಾಗಿ ಒಂದು ವಾರ ಕಾಲ ನಡೆಯಿತು. ಆದರೆ, ಅದರಲ್ಲಿ ಯಾವುದೇ ಸ-ಲತೆ ಕಾಣಲಿಲ್ಲ. ಹಾಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಮುಂದೆ ಈ ದಿಕ್ಕಿನಲ್ಲಿ ಕಾರ್ಯಸಾಧ್ಯತೆ ಬಗ್ಗೆ ಯಾವುದೇ ಚರ್ಚೆ, ಕಾರ್ಯಾಚರಣೆ ನಡೆಯಲೇ ಇಲ್ಲ. ಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಪ್ರಮಾಣ ಮತ್ತು ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಜಾಗ ಇಕ್ಕಟ್ಟಾಗುತ್ತಿರುವುದರಿಂದ ಪೀಪಲ್ಸ್ ಪಾರ್ಕ್ ಜಾಗವನ್ನು ಪಡೆದುಕೊಂಡು ನಿಲ್ದಾಣ ವಿಸ್ತರಿಸಲು ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗೀಯ ಅಧಿಕಾರಿಗಳು ಪ್ಲಾನ್ ಮಾಡಿದ್ದರೂ ಭವಿಷ್ಯದ ದಿನಗಳ ಒತ್ತಡಕ್ಕೆ ಯಾವುದೇ ಚಿಂತನೆ ಮಾಡಿಲ್ಲ. ಹೀಗಾಗಿ, ಹೊರವಲಯದಲ್ಲಿರುವ ಹೈಟೆಕ್ ಬಸ್ ನಿಲ್ದಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರಮುಖ ನಗರಗಳಿಗೆ ಸಂಚರಿಸುವ ಬಸ್‌ಗಳನ್ನು ಅಲ್ಲಿಂದಲೇ ಕಾರ್ಯಾಚರಣೆ ಮಾಡುವಂತೆ ನೋಡಿಕೊಂಡರೆ ಹೃದಯ ಭಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಐದಾರು ವರ್ಷಗಳ ಪರಿಹಾರದ ಪ್ಲಾನ್ ಮಾಡುವ ಬದಲಿಗೆ ಶಾಶ್ವತವಾದ ಯೋಜನೆ ರೂಪಿಸಬೇಕಿದೆ.

ಬನ್ನೂರು, ತಿ. ನರಸೀಪುರ, ಕೊಳ್ಳೇಗಾಲ ಮಾರ್ಗಕ್ಕೆ: ಸಾತಗಳ್ಳಿ ಬಸ್ ನಿಲ್ದಾಣವನ್ನೇ ಸ್ಯಾಟಲೈಟ್ ಮಾದರಿಯ ಬಸ್ ನಿಲ್ದಾಣವನ್ನಾಗಿ ಮಾಡಿದರೆ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಬಸ್‌ಗಳಿಗೆ ದೊಡ್ಡ ಅನುಕೂಲವಾಗಲಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿರುವ ಅಽಕಾರಿಗಳು ಸಾತಗಳ್ಳಿ ಬಸ್ ನಿಲ್ದಾಣಕ್ಕೆ ಮರು ಜೀವ ಕೊಟ್ಟು ಮತ್ತೆ ಹೈಟೆಕ್ ಸ್ವರೂಪವನ್ನು ನೀಡಿದರೆ ಖಂಡಿತ ಅರ್ಧಕ್ಕೆ ಅರ್ಧ ಒತ್ತಡ ನೀಗಿಸಬಹುದು ಎಂಬುದು ಲೆಕ್ಕಾಚಾರವಾಗಿದೆ.

ಮಂಡ್ಯ, ಬೆಂಗಳೂರು ಮಾರ್ಗಕ್ಕೆ: ಮಂಡ್ಯ ಹಾಗೂ ಬೆಂಗಳೂರು ಕಡೆಯ ವಾಹನಗಳ ಕಾರ್ಯಾಚರಣೆಗೆ ನಾಯ್ಡುನಗರದ ಬಸ್ ನಿಲ್ದಾಣ, ಬನ್ನಿಮಂಟಪದಲ್ಲಿರುವ ೪ ಸಾರಿಗೆ ಘಟಕಗಳನ್ನು ಸ್ಯಾಟಲೈಟ್ ಬಸ್ ನಿಲ್ದಾಣ ಮಾದರಿಯಲ್ಲಿ ಬಳಸಿಕೊಳ್ಳಬಹುದಾಗಿದೆ.

ಕೊಡಗು, ಹುಣಸೂರು, ಹಾಸನ, ಮಗಳೂರು ಮಾರ್ಗಕ್ಕೆ: ಕೊಡಗು, ಹುಣಸೂರು, ಹಾಸನ, ಮಗಳೂರು ಮಾರ್ಗದಿಂದ ಕಾರ್ಯಾಚರಣೆ ನಡೆಸುವ ವಾಹನಗಳಿಗೆ ವಿಜಯನಗರ ೪ನೇ ಹಂತದಲ್ಲಿರುವ ಡಿಪೋವನ್ನು ಬಳಸಿಕೊಳ್ಳಬಹುದು.

ನಂಜನಗೂಡು, ಚಾ. ನಗರ, ಗುಂಡ್ಲುಪೇಟೆ, ತಮಿಳುನಾಡು, ಕೇರಳ ಮಾರ್ಗಕ್ಕೆ: ನಂಜನಗೂಡು, ಚಾ. ನಗರ, ಗುಂಡ್ಲುಪೇಟೆ, ತಮಿಳುನಾಡು, ಕೇರಳ ಮುಂತಾದ ಕಡೆಗಳಿಂದ ಕಾರ್ಯಾಚರಣೆ ನಡೆಸುವ ವಾಹನಗಳಿಗೆ ಸಬ್ ಅರ್ಬನ್ ಬಸ್ ನಿಲ್ದಾಣ ಹಾಗೂ ಕುವೆಂಪುನಗರ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳಬಹುದು.

ಜೆಎನ್ ನರ್ಮ್ ಮೈಸೂರಿಗೆ ವರದಾನ: ಮೈಸೂರು: ಹಲವಾರು ವರ್ಷಗಳಿಂದ ಅದೇ ಹಳೆಯ ಕಾಲದ ಬಸ್ ಗಳನ್ನೇ ಕಂಡಿದ್ದ ಮೈಸೂರಿನ ಜನರಿಗೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಹೈಟೆಕ್ ಬಸ್‌ಗಳು ಆರಾಮದಾಯಕ ಸೇವೆ ಒದಗಿಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ‘ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀನ ಯೋಜನೆ’ (ಜವಾಹರ್‌ಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನ್ಯೂಯಲ್ ಮಿಷನ್-ಜೆನ್ ನರ್ಮ್) ಮೈಸೂರಿನ ಪಾಲಿಗೆ ವರದಾನವಾಗಿತ್ತು. ದೇಶದ ೬೩ ನಗರಗಳಿಗೆ ಬೃಹತ್ ನರ್ಮ್ ಯೋಜನೆ ಲಾಭ ದಕ್ಕಿದ್ದು, ಅದರ ಲಾಭ ಪಡೆದಿರುವ ಕರ್ನಾಟಕದ ಎರಡು ನಗರ ಗಳಲ್ಲಿ ಮೈಸೂರು ಕೂಡ ಒಂದಾಗಿತ್ತು. ಪಾರಂಪರಿಕ ನಗರಿ ಎನ್ನುವ ಕಾರಣಕ್ಕೆ ನರ್ಮ್ ಮೈಸೂರನ್ನು ಹುಡುಕಿಕೊಂಡು ಬಂದಿದ್ದರಿಂದಾಗಿ ಕೇವಲ ಒಂದೆರಡು ನೂರು ಕೋಟಿಗಳಲ್ಲ, ಬರೋಬರಿ ೨ ಸಾವಿರ ಕೋಟಿ ರೂ. ಮೈಸೂರಿನ ಮಡಿಲಿಗೆ ಬಿದ್ದಿತ್ತು. ಸಾರಿಗೆ ಇಲಾಖೆ ಈ ನರ್ಮ್ ಯೋಜನೆಯ ಪಾಲನ್ನು ಪಡೆದುಕೊಂಡು ಪ್ರಗತಿ ಹಾದಿಯಲ್ಲಿ ನಡೆಯಲಾರಂಭಿಸಿ ಹಳೆ ಬಸ್ ನಿಲ್ದಾಣಗಳಿಗೆ ಹೊಸ ಸ್ವರೂಪ ನೀಡುವ ಜತೆಗೆ ನಗರದ ಎಲ್ಲ ದಿಕ್ಕುಗಳಲ್ಲೂ ಬಸ್ ಟರ್ಮಿನಲ್ ಸೆಂಟರ್‌ಗಳ ನಿರ್ಮಾಣಕ್ಕೂ ಹೆಜ್ಜೆ ಹಾಕಿತ್ತು. ಗ್ರಾಮಾಂತರ ಬಸ್ ನಿಲ್ದಾಣವನ್ನು ಮೇಲ್ದರ್ಜೇಗೇರಿಸಿ ಕೇಂದ್ರೀಯ ಬಸ್ ನಿಲ್ದಾಣವಾಗಿ ಮಾಡಿದ ಮೇಲೆ ಜೆಎನ್-ನರ್ಮ್ ಅಡಿಯಲ್ಲಿ ಹೊಸ ಬಸ್‌ಗಳಿಗೆ ೫೦. ೩೦ ಕೋಟಿ ರೂ. ಮಂಜೂರಾಗಿದ್ದರಿಂದ ೩೦ ನಗರ ಸಾರಿಗೆ ವೋಲ್ವೋ ಬಸ್, ೭೯ ಸೆಮಿ ಲೋಫ್ಲೋರ್ ವಾಹನಗಳು, ೪೧ ಮಾರ್ಕೋಪೋಲೋ ವಾಹನ ಸೇರಿ ೧೫೦ ಬಸ್‌ಗಳನ್ನು ಖರೀದಿಸಲಾಗಿತ್ತು. ಇಂದಿಗೂ ಅದೇ ಬಸ್‌ಗಳು ಕಾರ್ಯಾಚರಣೆ ಮಾಡುತ್ತಲೇ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.

ಸಾತಗಳ್ಳಿ ಬಸ್ ನಿಲ್ದಾಣದ ಕಾರ್ಯಾಚರಣೆ ಫ್ಲಾಪ್: ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದ ಮೇಲಿನ ಒತ್ತಡವನ್ನು ತಗ್ಗಿಸಲು ಸಾತಗಳ್ಳಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು. ಅದೇ ರೀತಿ ವಿಜಯನಗರ ನಾಲ್ಕನೇ ಹಂತದಲ್ಲಿ ಸಾರಿಗೆ ಡಿಪೋ, ಕುವೆಂಪುನಗರದಲ್ಲಿ ಬಸ್ ನಿಲ್ದಾಣ, ಆರ್. ಎಸ್. ನಾಯ್ಡುನಗರದಲ್ಲಿ ಇಂಟರ್ ಮಾಡಲ್ ಟ್ರಾನ್ಸಿಟ್ ಸೆಂಟರ್ ನಿರ್ಮಾಣ ಮಾಡಲಾಯಿತು. ಬೆಂಗಳೂರು ಮಾರ್ಗದಿಂದ ಬರುವ ಬಸ್‌ಗಳು ಸಾತಗಳ್ಳಿಯಲ್ಲಿ ನಿಲುಗಡೆ ಮಾಡಿ, ಅಲ್ಲಿಂದ ನಗರ ಸಾರಿಗೆ ಬಸ್‌ನಲ್ಲಿ ನಗರ ಪ್ರವೇಶಿಸುವಂತೆ ಮಾಡುವುದಕ್ಕಾಗಿ ನಿರ್ಮಾಣ ಮಾಡಲಾಯಿತು. ಪ್ರಾರಂಭದಲ್ಲಿ ನಿಲ್ದಾಣದಿಂದ ಬಸ್‌ಗಳು ಸಂಚಾರ ಮಾಡಿದರೂ ಪ್ರಯಾಣಿಕರ ಸಮಸ್ಯೆ, ಅಧಿಕಾರಿಗಳು ಬೆಂಗಳೂರಿಗೆ ಇದೇ ನಿಲ್ದಾಣದಿಂದ ಬಸ್ ಸಂಚರಿಸುವಂತೆ ಕಡ್ಡಾಯ ಮಾಡದ ಕಾರಣ ಯಥಾಸ್ಥಿತಿ ಮುಂದುವರಿದಿದೆ. ನಿರೀಕ್ಷಣಾ ಹಜಾರ, ಮಹಿಳಾ ಸಿಬ್ಬಂದಿ ವಿಶ್ರಾಂತಿ ಕೊಠಡಿ, ಲಗ್ಗೇಜ್ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ, ಬಸ್ಸು, ರೈಲ್ವೆ, ವಿಮಾನ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೌಂಟರ್, ಪೊಲೀಸ್ ಚೌಕಿ, ಬ್ಯಾಂಕ್, ಎಟಿಎಂ, ಅಂಚೆ ಕಚೇರಿ, ಔಷಧ ಅಂಗಡಿ, ಸೈಬರ್ ಕೆಫೆ, ಫುಡ್‌ಕೋರ್ಟ್, ಸೂಪರ್ ಮಾರ್ಕೆಟ್, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳು, ಪ್ರಯಾಣಿಕರ ತಂಗು ಕೊಠಡಿ, ಆಧುನಿಕ ಪಾರ್ಕಿಂಗ್ ವ್ಯವಸ್ಥೆ, ಮನರಂಜನಾ ಕೇಂದ್ರ. ದೂರವಾಣಿ, ವಿದ್ಯುತ್, ನೀರಿನ ಬಿಲ್ ಪಾವತಿ ಕೇಂದ್ರ ಸೌಲಭ್ಯ ಒದಗಿಸಬೇಕಾದ ಕಟ್ಟಡ ಈಗ ಈಗ ಸಾರಿಗೆಗೆ ಅನುಕೂಲಕ್ಕೆ ಬಾರದೆ ಖಾಸಗಿ ಕಾಲೇಜಿಗೆ ಬಾಡಿಗೆಗೆ ನೀಡಲಾಗಿದೆ. ಹೀಗಾಗಿ, ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬರುತ್ತಿರುವ ಬಸ್‌ಗಳನ್ನು ಅಲ್ಲಿಂದಲೇ ಬೆಂಗಳೂರು ಮಾರ್ಗಕ್ಕೆ ಸಂಚರಿಸುವಂತೆ ಮಾಡಿದರೆ ಬಹುಪಾಲು ಒತ್ತಡ ನಿವಾರಣೆಯಾಗಲಿದೆ ಎಂಬ ಮಾತು ಮತ್ತೊಮ್ಮೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

 

 

Tags:
error: Content is protected !!