Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

‘ಕಸ್ಟಡಿ’ಯಲ್ಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ‘ಭೀಮ’ ಪ್ರಿಯ

ಫೇಸ್‍ಬುಕ್‍ನಲ್ಲಿ ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ನಿರ್ಮಾಪಕ ನಾಗೇಶ್‍ ಕುಮಾರ್‍ ಯಾವಾಗಲೂ ಬರೆಯುತ್ತಲೇ ಇರುತ್ತಾರೆ. ಸಿನಿಮಾ ನಿರ್ಮಾಣದ ಕಷ್ಟ-ನಷ್ಟಗಳ ಕುರಿತು ಬೆಳಕು ಚೆಲ್ಲುತ್ತಲೇ ಇರುತ್ತಾರೆ. ಮಾಡಿದ ಸಿನಿಮಾಗಳು ದುಡ್ಡು ತಂದುಕೊಡಲಿಲ್ಲ ಎಂದು ಆಗಾಗ ಹೇಳಿಕೊಳ್ಳುತ್ತಲೇ, ಇದೀಗ ಅವರು ಹೊಸದೊಂದು ಚಿತ್ರವನ್ನು ಶುರು ಮಾಡಿದ್ದಾರೆ.

ಬೃಂದಾವನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಾಗೇಶ್ ಕುಮಾರ್ ಯು.ಎಸ್ ನಿರ್ಮಿಸುತ್ತಿರುವ ಹೊಸ ಚಿತ್ರದ ಹೆಸರು ‘ಕಸ್ಟಡಿ’. ಈ ಚಿತ್ರವನ್ನು ಜೆ.ಜೆ. ಶ್ರೀನಿವಾಸ್ ಬರೆದು ನಿರ್ದೇಶನ ಮಾಡಿದ್ದು, ‘ಭೀಮ’ ಚಿತ್ರದ ಗಿರಿಜಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರಿಯ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದ ಬಳಿ ಇರುವ ಟೊರಿನೊ ಫ್ಯಾಕ್ಟರಿ ಆವರಣದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

‘ಕಸ್ಟಡಿ’ ಕುರಿತು ಮಾತನಾಡುವ ನಾಗೇಶ್‍ ಕುಮಾರ್, ‘ನಮ್ಮ ಸಂಸ್ಥೆಯ ಮೂಲಕ ‘ಗಜಾನನ ಗ್ಯಾಂಗ್’ ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ. ‘ಕಸ್ಟಡಿ’ ಐದನೇ ಚಿತ್ರ. ಸ್ನೇಹಿತ ಜೆ.ಜೆ.ಶ್ರೀನಿವಾಸ್ ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಈ ಚಿತ್ರದ ಪ್ರಮುಖ ಪಾತ್ರವನ್ನು ‘ಭೀಮ’ ಖ್ಯಾತಿಯ ಪ್ರಿಯ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಪ್ರಿಯ ಅವರ ಪತಿ ಅವಿನಾಶ್ ನನ್ನ ಮಿತ್ರ. ಅವರ ಮೂಲಕ ಪ್ರಿಯ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದೆವು. ಅವರು ಒಪ್ಪಿದ್ದರಿಂದ ಕೆಲವೇ ದಿನಗಳಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಸದ್ಯ ಚಿತ್ರೀಕರಣ ಬಿರುಸಿನಿಂದ ಸಾಗಿದೆ’ ಎಂದು ನಿರ್ಮಾಪಕ ನಾಗೇಶ್ ಕುಮಾರ್ ತಿಳಿಸಿದರು.

‘ಕಸ್ಟಡಿ’ ಸೈಬರ್ ಕ್ರೈಮ್ ಕುರಿತಾದ ಕಥಾಹಂದರ ಹೊಂದಿರುವ ಚಿತ್ರವಂತೆ. ‘ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ‌. ಸೈಬರ್ ಕ್ರೈಮ್ ನ ಕುರಿತಾದ ಕಥೆಗಳು ಸಾಕಷ್ಟು ಬಂದಿದೆಯಾದರೂ ಈ ಕಥೆ ಸ್ವಲ್ಪ ವಿಭಿನ್ನ. ಒಂದು ವರ್ಷದ ಹಿಂದೆ ಈ ಚಿತ್ರದ ಕಥೆ ಸಿದ್ದವಾಗಿತ್ತು. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಅನ್ವೇಷಣೆಯಲ್ಲಿದ್ದಾಗ ‘ಭೀಮ’ ಖ್ಯಾತಿಯ ಪ್ರಿಯ ಅವರು ಈ ಪಾತ್ರ ಮಾಡಬಹುದು ಅನಿಸಿತು‌. ಪ್ರಿಯ ಅವರು ಕಥೆ ಕೇಳಿ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈಗ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ‌. ಕಾಕ್ರೋಜ್ ಸುಧೀ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ‌. ನಾನು ಸಹ ನಿರ್ದೇಶನದ ಜತೆಗೆ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು.

‘ಭೀಮ’ದಂತೆ ಈ ಚಿತ್ರದಲ್ಲೂ ತಾನು ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದೇನೆ ಎನ್ನುವ ಪ್ರಿಯಾ, ‘ದುರ್ಗಾಪರಮೇಶ್ವರಿ ನನ್ನ ಪಾತ್ರದ ಹೆಸರು. ನಿರ್ದೇಶಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದೊಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಕಥೆ ಹಾಗೂ ನಿರ್ಮಪಕ ನಾಗೇಶ್ ಕುಮಾರ್ ಅವರು ನನ್ನ ರಂಗಭೂಮಿ ದಿನಗಳಲ್ಲಿ ರಂಗ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಅನ್ನದ ಋಣ ನನ್ನ ಮೇಲಿದೆ. ‘ಭೀಮ’ ನಂತರ ನಾನು ನಟಿಸುತ್ತಿರುವ ಚಿತ್ರವಿದು’ ಎಂದರು ಪ್ರಿಯ.

‘ಕಸ್ಟಡಿ’ ಚಿತ್ರದಲ್ಲಿ ನಾಗೇಂದ್ರ ಅರಸ್, ಚಿಂಗಾರಿ ಮಹಾದೇವ್, ಮ್ಯಾಜಿಕ್ ರಮೇಶ್, ಮಧು ಕೆ.ಆರ್ ಪೇಟೆ, ಪವನ್ ಕುಮಾರ್, ಆರಾಧ್ಯ, ಕುಮಾರ್ ಶ್ರೀನಿವಾಸಮೂರ್ತಿ, ವಿನ್ಯಾ, ಅಶ್ವಿತಾ ಮುಂತಾದವರು ನಟಿಸುತ್ತಿದ್ದಾರೆ.

Tags: