Mysore
15
broken clouds

Social Media

ಗುರುವಾರ, 02 ಜನವರಿ 2025
Light
Dark

ರಾತ್ರಿ ಬೇಟೆಗಾರನ ಕಥೆ ಇದು; ‘ಬಘೀರ’ ಟ್ರೇಲರ್ ಬಿಡುಗಡೆ

‘ಬಘೀರ’ ಚಿತ್ರದಲ್ಲಿ ಶ್ರೀಮುರಳಿ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಮೇಲ್ನೋಟಕ್ಕೆ ಅವರು ಪೊಲೀಸ್‍ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕಂಡರೂ, ಹಿನ್ನೆಲೆಯಲ್ಲಿ ಬೇರೇನೋ ಇದೆ ಎಂದನಿಸುವುದು ಹೌದು. ಅದು ನಿಜವಾಗಿದೆ. ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಶ್ರೀಮುರಳಿ ಸೂಪರ್‍ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಡಾ. ಸೂರಿ ನಿರ್ದೇಶನದ ‘ಬಘೀರ’ ಚಿತ್ರವು ಇದೇ ಅಕ್ಟೋಬರ್‍ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‍ ಬಿಡುಗಡೆ ಇತ್ತೀಚೆಗೆ ಆಗಿದೆ. ಈ ಸಂದರ್ಭದಲ್ಲಿ ಚಿತ್ರದ ಸಾರಾಂಶವೇನು ಎಂದು ನಿರ್ದೇಶಕ ಡಾ. ಸೂರಿ ಹೇಳಿಕೊಂಡಿದ್ದಾರೆ.

‘ಬಘೀರ’ ಕುರಿತು ಮಾತನಾಡುವ ನಿರ್ದೇಶಕ ಸೂರಿ, ‘’ಬಘೀರ’ ಎಂದರೆ ನೈಟ್ ಹಂಟರ್ ಎಂದರ್ಥ. ಇದು ರಾತ್ರಿವೇಳೆಯಲ್ಲೇ ಭೇಟೆಯಾಡುತ್ತದೆ. ನಮ್ಮ ಚಿತ್ರದ ಕಥೆಯ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. ‘ಸೂಪರ್ ಹೀರೋ’ ಕಾನ್ಸೆಪ್ಟ್ ನ ಈ ತರಹದ ಕಥೆ ನನ್ನ ಪ್ರಕಾರ ಕನ್ನಡದಲ್ಲಿ ಬಂದಿಲ್ಲ.‌ ಇಲ್ಲಿ ರಾತ್ರಿ ಹೊತ್ತು ನಾಯಕ ಬೇಟೆ ಆಡುತ್ತಿರುತ್ತಾನೆ. ಯಾಕೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು’ ಎಂದರು.

ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಗುವ ದಿನ ಸಮೀಪಿಸಿದೆ ಎನ್ನುವ ಶ್ರೀಮುರಳಿ, ‘ಈ ಚಿತ್ರದ ತಂತ್ರಜ್ಞರು, ಕೆಲಸದಲ್ಲಿ ರಾಕ್ಷಸರು. ಅವರ ಕೆಲಸ ತೆರೆಯ ಮೇಲೆ ಕಾಣುತ್ತಿದೆ. ಪ್ರಶಾಂತ್ ನೀಲ್ ಅವರ ಕಥೆಯ ಬಗ್ಗೆ ಹೇಳುವ ಹಾಗೆ ಇಲ್ಲ. ಅಂತಹ ಅದ್ಭುತ ಕಥೆ ಕೊಟ್ಟಿದ್ದಾರೆ ಅವರು. ಸೂಪರ್ ಹೀರೋ ತರಹ ನಾನು ಕಾಣಿಸಿಕೊಂಡಾಗ ಹೆಚ್ಚು ಖುಷಿಯಾಯಿತು’ ಎಂದರು.

‘ಬಘೀರ’ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‍ ಅಭಿನಯಿಸಿದರೆ, ನಾಯಕಿಯ ತಾಯಿಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಗರುಡ ರಾಮ್‍, ಪ್ರಮೋದ್‍ ಶೆಟ್ಟಿ, ರಂಗಾಯಣ ರಘು, ಪ್ರಕಾಶ್‍ ರೈ, ರಾಘು ರಾಮನಕೊಪ್ಪ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ ಮತ್ತು ಅಜನೀಶ್‍ ಲೋಕನಾಥ್‍ ಸಂಗೀತವಿದೆ.

‘ಬಘೀರ’ ಚಿತ್ರದ ಟ್ರೇಲರ್ ನಾಲ್ಕು ಲಕ್ಷ ವೀಕ್ಷಣೆ ಕಂಡಿದೆ.

Tags: