ಕೊಡಗು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ್ದ ಆನೆಗಳಾದ ಧನಂಜಯ ಹಾಗೂ ಕಂಜನ್ ದುಬಾರೆ ಶಿಬಿರದಲ್ಲಿ ಗುದ್ದಾಡಿಕೊಂಡಿದ್ದು, ಮಾವುತರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ದಸರಾಗೆ ಆಗಮಿಸಿದ್ದ ಧನಂಜಯ ಹಾಗೂ ಕಂಜನ್ ಆನೆಗಳ ಕಚ್ಚಾಟ ಮತ್ತೆ ಮುಂದುವರಿದಿದ್ದು, ದುಬಾರೆ ಆನೆ ಶಿಬಿರದಲ್ಲಿ ಧನಂಜಯ ಆನೆಯು ಕಂಜನ್‌ಗೆ ಕೊಂಬಿನಿಂದ ತಿವಿದು ಗುದ್ದಾಟ ನಡೆಸಿದೆ.
ಕಳೆದ ತಿಂಗಳು ಮೈಸೂರು ಅರಮನೆಯಲ್ಲೂ ಕೂಡ ಧನಂಜಯ ಕಂಜನ್ ಆನೆಯನ್ನು ಅಟ್ಟಾಡಿಸಿಕೊಂಡು ಹೋಗಿತ್ತು. ಪರಿಣಾಮ ಕಂಜನ್ ಆನೆ ಅರಮನೆಯಿಂದ ಹೊರಗಡೆ ಬಂದು ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು.
ಈಗ ದಸರಾವನ್ನು ಯಶಸ್ವಿಯಾಗಿ ಮುಗಿಸಿ ಕಾಡಿನತ್ತ ಹೋದರೂ ಅಲ್ಲೂ ಕೂಡ ಧನಂಜಯ ಹಾಗೂ ಕಂಜನ್ ಆನೆಗಳು ಈ ರೀತಿ ಗುದ್ದಾಟ ನಡೆಸುತ್ತಿರುವುದು ಕಾವಾಡಿಗರು ಹಾಗೂ ಮಾವುತರಿಗೆ ಬೇಸರ ತರಿಸಿದೆ.
ಘರ್ಷಣೆ ಬಳಿಕ ಆನೆಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎನ್ನಲಾಗಿದ್ದು, ಎರಡೂ ಆನೆಗಳು ಆರೋಗ್ಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.