Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕವಿತೆ ಮತ್ತು ಪಾರಿವಾಳದ ಹಿಕ್ಕೆಗಳು

ಹನಿ ಉತ್ತಪ್ಪ

ನಮ್ಮ ಊರಿನ ಎಮ್ಮೆಗಳು ಬಿದ್ದುಕೊಳ್ಳುವ ಸಣ್ಣ ಹೊಂಡದಲ್ಲೂ ಈಜಲು ಬಾರದ ನಾನು ಕವಿತೆಯೆಂಬ ಮಹಾಸಾಗರದಲ್ಲಿ ಈಜಾಡಲು ಸಾಧ್ಯವಿಲ್ಲ. ಆದರೂ ಒಂದು ಕೈ ನೋಡೇ ಬಿಡೋಣವೆಂದು ವಿಶ್ವವಿಖ್ಯಾತ ಮೈಸೂರು ಜಗನ್ಮೋಹನ ಅರಮನೆಯ ಐತಿಹಾಸಿಕ ದಸರಾ ಕವಿಗೋಷ್ಠಿಗೆ ಹೋಗಿದ್ದೆ. ಕಾರ್ಯಕ್ರಮ ಆರಂಭವಾಗಿದ್ದದ್ದೇ ಮೇಲಿಂದ ಏನೋ ಜಿನುಗಿದಂತಾಯಿತು.

ಜಗನ್ಮೋಹನ ಅರಮನೆಗೆ ಸೂರಿದ್ದರೂ ಮಳೆ ಹನಿದದ್ದು ಆಶ್ಚರ್ಯವಾದರೂ ಒಮ್ಮೆ ತಲೆ ಎತ್ತಿ ನೋಡಿದರೆ ಪಾರಿವಾಳವೊಂದು ಕವಿತೆ ಕೇಳುತ್ತಾ ಪರವಶವಾಗಿ ಆನಂದದ ಹಿಕ್ಕೆಗಳನ್ನು ಮೇಲಿಂದ ಸುರಿಸಿತ್ತು. ಜಾಗ ಬದಲಿಸಿದೆ. ‘ಫಾಮಿದಾ, ಜಲ್ದಿ ಆಗ್ಯೇ ಮಾ. . . ಮಂಜೆ ಘರ್ ಮೇ ಕಾಮಾಂ ಥೇ, ಬಚ್ಚೆ ಅಲಾದಾ ಘರ್‌ಮೇಚ್ ಹೈಂ, ದಸೇರೆಕೆ ರಜ಼ೇಮೇ, ಉನ್ಕು ಖಾನ ಪಕಾನಾನಿ ಕ್ಯಾಮಾ ಮೈ? ಬಿರ್ಯಾನಿ ಪಕಾದಲ್ಕೊ ಐ! ; (ಫಾಮಿದಾ ಬೇಗ ಬಂದ್ಬಿಟ್ಟಿದಾಳೆ, ನನ್ಗೆ ಮನೇಲಿ ಕೆಲ್ಸ ಇತ್ತು, ಮಕ್ಳು ಬೇರೆ ದಸರಾ ರಜೇಗೆ ಮನೇಲೆ ಇದಾರೆ, ಅವ್ರಿಗೆ ಅಡ್ಗೆ ಮಾಡ್ಬಾರ್ದ ನಾನು? ಬಿರ್ಯಾನಿ ಮಾಡಿಟ್ಬಿಟ್ ಬಂದೆ! ) ಹಿಂದಿ ಗೊತ್ತಿದ್ದರಿಂದ ಉರ್ದುವಿನ ಆ ಸಾಲುಗಳು ಅರಿವಾಗಿ ಆಯಮ್ಮನ ಕಷ್ಟಗಳು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚು ಹೊತ್ತಾಗಲಿಲ್ಲ.

ಒಮ್ಮೆ ಹಿಂತಿರುಗಿ ನೋಡಿದೆ. ಸಭಾಂಗಣದ ಅರ್ಧ ಪಾಲು ಬುರ್ಖಾ ತೊಟ್ಟ ಮಹಿಳೆಯರು ಸಂಭಾಷಣೆಯಲ್ಲಿ ನಿರತರಾಗಿದ್ದರು. ಅರ್ಧ ಸಭಾಂಗಣ ತುಂಬಿದ್ದು ಈ ಅಮಾಯಕ ಬುರುಕಾಧಾರಿಗಳ ಗುಂಪೇ ಹಾಗೇ ಕತ್ತು ಜಾರಿಸಿ, ಇವರಿಗೆ ಕವಿತೆಯ ಆಸಕ್ತಿ ಹೇಗೆ ಮೂಡಿತೆಂದು ಕೇಳಬೇಕೆನಿಸಿತು. ಸಂವಹನ ನಡೆಸುವ ಮಾರ್ಗ? ನನಗೋ ಉರ್ದು ಭಾಷೆ ಹುರಿದು ತಿನ್ನಲೂ ಬರುವುದಿಲ್ಲ.. ಅವರಿಗೋ ಕನ್ನಡ ಅಷ್ಟಿಷ್ಟು ಗೊತ್ತಿದ್ದರೂ ಕವಿತೆಗಳ ತಲೆಬುಡ ಗೊತ್ತಿರುವ ಹಾಗೆ ಅನಿಸುತ್ತಿರಲಿಲ್ಲ. ಕವಿಗೋಷ್ಠಿ ಮಾತ್ರ ಕನ್ನಡದಲ್ಲಿ ನಡೆಯುತ್ತಲಿತ್ತು. ಮೇಲೆ ವೇದಿಕೆಯಲ್ಲಿ ಕವಿ ಮಹಾಶಯರುಗಳ ಕವಿತೆಯ ಅಬ್ಬರದ ಅಲೆಗಳು ಒಂದಾದರ ಮೇಲೊಂದರಂತೆ ಪ್ರೇಕ್ಷಕರ ಕಿವಿ ತಮಟೆಗಳ ಮೇಲೆ ಅಪ್ಪಳಿಸುತ್ತಲಿತ್ತು.

ನಜ್ರಿಯಾ ಎಂಬಾಕೆ ಅರ್ಧ ಗಂಟೆ ತಡವಾಗಿ ಬಂದಿದ್ದಳು. ಇನ್ನು ಅರ್ಧ ಗಂಟೆ ಮೊದಲು ಬಂದವರ ಕತೆ ಇನ್ನೂ ಕಠೋರವಾಗಿತ್ತು. ಅತ್ತ ಮನೆಯಲ್ಲಿ ಭಾನುವಾರ ಆದ್ದರಿಂದ ಯಜಮಾನರು ಮಟನ್ ಅಂಗಡಿಯಿಂದ ಬನ್ನೂರು ಕುರಿ ಕತ್ತರಿಸಿ ತಂದು ಬಿರಿಯಾನಿಗೆ ಕಾಯುತ್ತಿದ್ದರೆ ಇತ್ತ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬರುವಂತಿಲ್ಲ ಎಂದು ಕರೆದುಕೊಂಡು ಬಂದ ಆ ತುಂಟ ಮಕ್ಕಳೋ ಅಮ್ಮಂದಿರನ್ನು ಗೋಳಾಡಿಸಿ, ಮೊಬೈಲ್ ಪಡೆದು ಯೂಟ್ಯೂಬ್‌ನಲ್ಲಿ ಕಾರ್ಟೂನು, ರೀಲ್ಸ್ ನೋಡುತ್ತಾ ಮಜಾ ಮಾಡುತ್ತಿದ್ದರು. ಯಾವ ಕವಿತೆ ಇಷ್ಟವಾಯಿತು? ಎಂಬ ಪ್ರಶ್ನೆಗೆ ಮಜೀದಾ ಮುಂದಿನವರನ್ನು ಕೇಳಿ ಎಂದು ಸರಳವಾಗಿ ಉತ್ತರಿಸಿದರು. ಮತ್ತೆ ಮನೆಯ ಜವಾಬ್ದಾರಿ ಬಿಟ್ಟು ಬಂದಿದ್ದೀರಲ್ಲಾ! ಎಂದೆ. ಗುಂಪಿನಲ್ಲಿ ಜೋರು ನಗು. ಇವರೆಲ್ಲ ಅಂಗನವಾಡಿ ಸಹಾಯಕಿಯರು. ಕವಿಗೋಷ್ಠಿಯಲ್ಲಿ ಹಾಜರಿದ್ದು, ಸ್ಥಳ ಭರ್ತಿ ಮಾಡಬೇಕೆಂಬ ಆದೇಶ ಮೇಲಿಂದ ಇದೆ.

ಅದಕ್ಕಾಗಿ ಬಂದಿದ್ದೇವೆ ಎಂದಳು ಜಿಂಕೆ ಕಣ್ಣಿನ ಶಭಾನಾ. ಪಂಚ ಕವಿಗೋಷ್ಠಿಯಲ್ಲಿ ಕಡ್ಡಾಯವಾಗಿ ಹಾಜರಿದ್ದು ಇಲ್ಲಿಂದಲೇ ಹಾಜರಾತಿ ಹಾಕುವುದು ಕಡ್ಡಾಯವಂತೆ. ಅಽಕಾರಿಗಳ ಕಿವಿಗೆ ದಾಸವಾಳ ಹೂ ಇಡುವಂತಿಲ್ಲ. ಬಂದವರೆಲ್ಲ ತಂಡದ ಜೊತೆ ಸೇರಿ ಗುಂಪು ಫೋಟೊ ಕಳಿಸಬೇಕೆಂಬುದು ಈ ಆದೇಶ. ಏನು ಮಾಡೋದಮ್ಮ ಅಲ್ಲಿ ಮನೆಯಲ್ಲಿ ಸಾಹೇಬರ ಕಡ್ಡಾಯವಾಗಿ ಬಿರಿಯಾನಿ ಮಾಡುವ ಆದೇಶ. ಇತ್ತ ಸರಕಾರದಿಂದ ಕವಿಗೋಷ್ಠಿ ಕೇಳುವ ಆದೇಶ. ಒಟ್ಟಿನಲ್ಲಿ ಈ ಭಾನುವಾರ ನಮ್ದು ನಸೀಬು ಸರಿ ಇಲ್ಲ ಅಂದಿದ್ದು ಇಬ್ಬರು ತುಂಟ ಹುಡುಗರ ತಾಯಿ ಆರಿಫಾ.

ಕವಿಗೋಷ್ಠಿಯ ಕೊನೆಯ ದಿನ ನಿಸರ್ಗ ಸಂಸ್ಥೆಯ ಸ್ತ್ರೀಶಕ್ತಿ ಮಹಿಳೆಯರ ಗುಂಪು ಸೇರಿತ್ತು. ಸಂಘಕ್ಕೆ ದುಡ್ಡು ಕಟ್ತೀವಿ. ಯಾಕೆ ಬರಲಿಲ್ಲ ಅಂತ ಹೇಳಿಸಿಕೊಳ್ಳೋದಕ್ಕಿಂತ ಬಂದು ಸುಮ್ನೆ ಕೂರೋದೇ ವಾಸಿ ಎಂದು ಸೀಟು ತುಂಬಿಸಿದ್ದರು. ಇನ್ನು ವಿದ್ಯಾರ್ಥಿಗಳ ಕತೆ ಬೇರೆಯದು. ಕಾಲೇಜಿನ ಅಧ್ಯಾಪಕರು ಹಿಂದೆ ಸಾಲಿನಲ್ಲಿ ಕೂತು ರಿಜಿಸ್ಟರ್ ಬುಕ್ ಕಳಿಸುವುದು, ಈ ಮಕ್ಕಳು ಹೆಸರು, ತರಗತಿ ಬರೆದು ಸಹಿ ಮಾಡಿ ಪಕ್ಕದವರಿಗೆ ವರ್ಗಾಯಿಸುವುದು. ವಿದ್ಯಾರ್ಥಿಗಳು ನಗುವ, ಮಾತಾಡುವ ಸ್ವಾತಂತ್ರ್ಯಕ್ಕೇನೂ ಸಮಸ್ಯೆಯಿಲ್ಲ. ಮಧ್ಯಾಹ್ನ ಊಟ ಪೂರೈಸಿದ ಮೇಲೆ ಕಾಲೇಜಿಗೆ ಹೋಗಿ ಎರಡು ತರಗತಿಗಳಿಗೆ ಹಾಜರಾಗಬೇಕಿತ್ತು. ಕವಿತೆ, ಊಟ, ಓಡಾಟದ ನಡುವೆ ತರಗತಿಯ ಪಾಠ ಕೇಳುತ್ತಾ ನಿದ್ದೆ ಮಾಡಲೂ ಅವಕಾಶ ಕೊಟ್ಟಿದ್ದರೆ ಒಳ್ಳೇದಿತ್ತು ಮೇಡಂ ಅಂದಳು ಬಿ ಎ ಓದುತ್ತಿರುವ ಬಿಂದುರಾಣಿ ಕವಿಗೋಷ್ಠಿಯಲ್ಲಿ ಇಂತಹವರಿಗಾಗಿ ಇಬ್ಬರು ಸಹೋದರರು ಹುರಿಗಡಲೆ ಮಾರುತ್ತಿದ್ದರು. ಹಾವೇರಿಯಿಂದ ಮೈಸೂರಿನ ದಸರಾ ಕವಿಗೋಷ್ಠಿಗೆ ಬಂದ ಭಾಗ್ಯದಾತರು ಇವರು. ಗುಂಪಿನಲ್ಲಿ ಒಬ್ಬರು ಆರಂಭಿಸಿದ್ದೇ ಸಾಲಿನ ಪ್ರತಿಯೊಬ್ಬರೂ ಹತ್ತು ರೂಪಾಯಿ ಕೊಟ್ಟು ಪೊಟ್ಟಣ ಕಟ್ಟಿಸಿಕೊಂಡರು.

‘ಒಂದು ಹುರಿಗಡಲೆ ಬಾಯಿಗೆ ಬೀಳಲು ಕವಿತೆಯ ಎಷ್ಟು ಪದಗಳು ಬೇಕು?’ ಎಂದು ಇಬ್ಬರು ಯುವಕರು ಮಾತನಾಡುತ್ತಿದ್ದರು. ಬಹುಶಃ ಭೌತ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿರಬೇಕು. ಅವರ ವಿಜ್ಞಾನ ಸಿದ್ಧಾಂತಗಳೆಲ್ಲ ಕವಿಗೋಷ್ಠಿಯ ಜೊತೆಗೇ ರೂಪುದಳೆಯುತಲಿತ್ತು. ಕವಿಗೋಷ್ಠಿ ಜಾತ್ರೆಯಾಗಿದ್ದಂತೂ ನಿಜ. ಕವಿತೆಯನ್ನು ಒತ್ತಾಯದಿಂದ ಕೇಳಿಸಿಕೊಳ್ಳಿ ಎಂದರೆ ಹೇಗೆ! ಕವಿಗೋಷ್ಠಿ ಬೇಗ ಮುಗಿದರೆ ಮನೆ ಸೇರಬಹುದು, ಮಾಡಿಟ್ಟ ಬಿಸಿ ಬಿಸಿ ಬಿರಿಯಾನಿಯನ್ನು ಮನೆಯವರು ತಿಂದಿರುತ್ತಾರೊ ಇಲ್ಲವೊ ಎಂಬ ಯೋಚನೆ ನಡೆಸುತ್ತಿರುವ ಅಂಗನವಾಡಿ ಸಹಾಯಕಿಯರು, ಸಂಘದಿಂದ ಬಂದ ಹೆಂಗಸರು ತಾವು ಪ್ರಾಮಾಣಿಕವಾಗಿ ಕೂತಿರುವುದನ್ನು ಅಧಿಕಾರಿಗಳು ಗುರುತಿಸಿ ಸಾಲದ ಕಂತು ಒಂದೆರಡು ದಿನ ಬಿಟ್ಟು ಕಟ್ಟಬಹುದೆಂದು ರಿಯಾಯಿತಿ ನೀಡುತ್ತಾರೇನೊ ಎಂದು ಕಾಯುತ್ತಿದ್ದಾರೆ. ಬಾತ್, ವಡೆ, ಮೊಸರನ್ನ ತಿಂದು ಬೇಸತ್ತುಹೋದ ವಿದ್ಯಾರ್ಥಿಗಳು ಕೊನೆಯ ದಿನವೂ ಹೊಸ ಅಡುಗೆ ತಿನ್ನದೇ ಬೇಸತ್ತು ವಾಪಾಸ್ಸಾಗಿದ್ದಾರೆ. ಬಹುಶಃ ಮುಂದೊಂದು ದಿನ ಈ ಬೇಸತ್ತು ವಾಪಾಸಾದ ವಿದ್ಯಾರ್ಥಿಗಳಲ್ಲಿ ಯಾವನಾದರೂ ಒಬ್ಬ ರೊಚ್ಚಿಗೆ ಬಿದ್ದು ಕವಿತೆ ಬರೆಯಲು ತೊಡಗಿ ಕನ್ನಡದ ಪ್ರಮುಖ ಉದಯೋನ್ಮುಖ ಕವಿಯಾಗುವ ಎಲ್ಲ ಸಾಧ್ಯತೆಗಳೂ ಇವೆ ಅಂತ ಅನಿಸಿದ್ದು ಬಹುಶಃ ನನಗೊಬ್ಬಳಿಗೆ ಮಾತ್ರ ಇರಬಹುದೇ?

 

Tags: